ADVERTISEMENT

ಅನುದಾನ ಬಿಡುಗಡೆ ಹೊಣೆ ಜಿಲ್ಲಾಧಿಕಾರಿಗೆ

ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಧನಸಹಾಯ ವಿಳಂಬ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:00 IST
Last Updated 23 ಆಗಸ್ಟ್ 2019, 20:00 IST
   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ನೀಡುವ ಧನಸಹಾಯವನ್ನು ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ ಪ್ರತ್ಯೇಕವಾಗಿ ಇರಿಸಲಾಗಿದ್ದ 2018–19ನೇ ಸಾಲಿನ ಧನಸಹಾಯದ ಅನುದಾನವನ್ನು ಕಳೆದ ತಿಂಗಳು ಮೈತ್ರಿ ಸರ್ಕಾರ ಬಿಡುಗಡೆ ಮಾಡಿತ್ತು. ತಜ್ಞರ ಸಮಿತಿ ಆಯ್ಕೆ ಮಾಡಿದ್ದ ಸಂಘ–ಸಂಸ್ಥೆಗಳ ಪಟ್ಟಿಯಲ್ಲಿ ನಕಲಿ ಸಂಸ್ಥೆಗಳು ಸೇರಿಕೊಂಡಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲಾಧಿಕಾರಿಗಳ ಮೂಲಕ ಅನುದಾನ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಸರ್ಕಾರದ ಆದೇಶ ಇದೀಗಸಂಘ–ಸಂಸ್ಥೆಗಳ ಮುಖ್ಯಸ್ಥರ ಗೊಂದಲಕ್ಕೆ ಕಾರಣವಾಗಿದೆ.

‘ಧನಸಹಾಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ₹ 2 ಲಕ್ಷಕ್ಕಿಂತ ಮೇಲ್ಪಟ್ಟು ಅನುದಾನ ಪಡೆಯುವಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.₹ 2 ಲಕ್ಷಕ್ಕಿಂತ ಕಡಿಮೆ ಅನುದಾನ ಪಡೆಯುವ ಸಂಘ–ಸಂಸ್ಥೆಗಳ ಬ್ಯಾಂಕ್‌ ಖಾತೆಗೆ ಇಲಾಖೆಯಿಂದಲೇ ಅನುದಾನ ಮೊತ್ತವನ್ನು ಆರ್‌ಟಿಜಿಎಸ್ ಮಾಡಲಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ ತಿಳಿಸಿದರು.

ADVERTISEMENT

‘ಜಿಲ್ಲಾಧಿಕಾರಿಗಳು ಪರಿಶೀಲಿಸಿದ ಬಳಿಕ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಮುಖಾಂತರ ಅನುದಾನ ಬಿಡುಗಡೆ ಮಾಡುತ್ತಾರೆ’ ಎಂದರು.

ಕಳೆದ ವರ್ಷ ಧನಸಹಾಯ ಪ್ರಕ್ರಿಯೆಅಂತಿಮಗೊಳ್ಳುವ ಹೊತ್ತಿನಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಇದರಿಂದಾಗಿ ಧನಸಹಾಯ ಪ್ರಕ್ರಿಯೆಯನ್ನು ಸ್ಥಗಿತ ಮಾಡಿ, ಯೋಜನೆಯ ₹11.60 ಕೋಟಿ ಅನುದಾನವನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ ಪ್ರತ್ಯೇಕವಾಗಿ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.