ADVERTISEMENT

ಸರ್ಕಾರಿ ಆಸ್ಪತ್ರೆ: ಖಾಸಗಿ ವಿಮೆಯಡಿ ಚಿಕಿತ್ಸೆ

ವಿಮಾ ಕಂಪನಿಗಳು ಪಾವತಿಸುವ ಹಣ ಆಸ್ಪತ್ರೆಯ ಅಭಿವೃದ್ಧಿ, ಸೌಲಭ್ಯ ವಿಸ್ತರಣೆಗೆ ಬಳಕೆ

ವರುಣ ಹೆಗಡೆ
Published 30 ಏಪ್ರಿಲ್ 2025, 23:20 IST
Last Updated 30 ಏಪ್ರಿಲ್ 2025, 23:20 IST
ಸಂಜಯ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ
ಸಂಜಯ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ   

ಬೆಂಗಳೂರು: ನಗರದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಖಾಸಗಿ ವಿಮೆಯಡಿಯೂ ಚಿಕಿತ್ಸೆ ನೀಡಲಾರಂಭಿಸಿದ್ದು, ವಿಮಾ ಕಂಪನಿಗಳು ಪಾವತಿಸುವ ಹಣವನ್ನು ಆಸ್ಪತ್ರೆಯ ಅಭಿವೃದ್ಧಿ ಹಾಗೂ ವೈದ್ಯಕೀಯ ಸೌಲಭ್ಯ ಬಲವರ್ಧನೆಗೆ ಬಳಸಿಕೊಳ್ಳಲು ನಿರ್ಧರಿಸಿವೆ.

ಆಸ್ಪತ್ರೆಗಳ ಆರ್ಥಿಕ ಸಂಪನ್ಮೂಲ ವೃದ್ಧಿ ಹಾಗೂ ಅಭಿವೃದ್ಧಿಯ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ಇಲಾಖೆಯು ಪ್ರಮುಖ ವೈದ್ಯಕೀಯ ಸಂಸ್ಥೆಗಳಿಗೆ ಖಾಸಗಿ ವಿಮೆಯಡಿ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ವೈದ್ಯಕೀಯ ಸಂಸ್ಥೆಗಳು ವಿವಿಧ ವಿಮಾ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು, ರೋಗಿಗಳ ದಾಖಲಾತಿ ಪ್ರಾರಂಭಿಸಿವೆ. ಈ ಸಂಬಂಧ ಆಸ್ಪತ್ರೆಗಳಲ್ಲಿನ ವಿಶೇಷ ವಾರ್ಡ್‌ಗಳನ್ನು ಬಳಸಿಕೊಳ್ಳಲಾಗಿದ್ದು, 5ರಿಂದ 7 ಹಾಸಿಗೆಗಳನ್ನು ಮೀಸಲಿಟ್ಟಿವೆ.

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿಕ್ಟೋರಿಯಾ ಆಸ್ಪತ್ರೆ, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಸಂಜಯ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸೇರಿ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಒಂದು–ಎರಡು ಖಾಸಗಿ ವಿಮೆ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿವೆ. ಇನ್ನಷ್ಟು ವಿಮಾ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲು ವೈದ್ಯಕೀಯ ಸಂಸ್ಥೆಗಳು ಆಸಕ್ತಿ ತೋರಿದ್ದು, ಮುಕ್ತ ಅವಕಾಶ ನೀಡಿವೆ.

ADVERTISEMENT

ಉತ್ತಮ ಸ್ಪಂದನೆ: ಜಯದೇವ ಹೃದ್ರೋಗ ಸಂಸ್ಥೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಯು (ಐಗಾಟ್) ಈ ಹಿಂದೆಯೇ ಖಾಸಗಿ ಆರೋಗ್ಯ ವಿಮೆ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು, ಚಿಕಿತ್ಸೆ ನೀಡುತ್ತಿವೆ. ಇಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದರಿಂದಲೇ ಉಳಿದ ವೈದ್ಯಕೀಯ ಸಂಸ್ಥೆಗಳೂ ವಿಮಾ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿವೆ. 

‘ಖಾಸಗಿ ಆಸ್ಪತ್ರೆಗಳಲ್ಲಿ ₹ 3 ಲಕ್ಷ ತಗಲುವ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ವ್ಯವಸ್ಥೆಯಡಿ ₹ 70 ಸಾವಿರದಿಂದ ₹ 80 ಸಾವಿರಕ್ಕೆ ನಡೆಸಲಾಗುತ್ತಿದೆ. ಇದರಿಂದಾಗಿ ವಿಮೆ ಮೌಲ್ಯ ಒಂದು ಲಕ್ಷ ರೂಪಾಯಿ ಇದ್ದರೂ ಇಲ್ಲಿ ಚಿಕಿತ್ಸೆ ಸಾಧ್ಯವಾಗಲಿದೆ. ವಿಶೇಷ ವಾರ್ಡ್‌ ಮಾತ್ರ ಬಳಸಿಕೊಳ್ಳುವುದರಿಂದ ಬಡ ರೋಗಿಗಳ ಚಿಕಿತ್ಸೆಗೆ ಸಮಸ್ಯೆ ಆಗುವುದಿಲ್ಲ. ಬದಲಾಗಿ, ವಿಮಾ ಕಂಪನಿಗಳು ಪಾವತಿಸುವ ಹಣದಿಂದ ಬಡ ರೋಗಿಗಳಿಗೆ ಇನ್ನಷ್ಟು ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ’ ಎಂದು ಸಂಜಯ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ (ಎಸ್‌ಜಿಐಟಿಒ) ನಿರ್ದೇಶಕ ಡಾ. ಮದನ್ ಬಲ್ಲಾಳ್ ತಿಳಿಸಿದರು.

ಕಡಿಮೆ ಪ್ರೀಮಿಯಂ ವಿಮೆ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಪ್ಯಾಕೇಜ್‌ ದರ ಅಧಿಕವಿರುವುದರಿಂದ ₹ 5 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಆರೋಗ್ಯ ರಕ್ಷಣೆ ಒದಗಿಸುವ ವಿಮೆಯನ್ನು ಖರೀದಿಸಬೇಕಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಪ್ಯಾಕೇಜ್‌ಗಳ ದರ ಕಡಿಮೆ ಇರಲಿದೆ. ಇದರಿಂದಾಗಿ ಕಡಿಮೆ ಪ್ರೀಮಿಯಂನ ವಿಮೆಯನ್ನೂ ಖರೀದಿಸಿ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಖಾಸಗಿ ವಿಮೆ ಕಂಪನಿಯೊಂದರ ಜತೆಗೆ ಒಪ್ಪಂದ ಮಾಡಿಕೊಂಡು ಚಿಕಿತ್ಸೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮೆ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು.
ಡಾ. ಸಂಜಯ್ ಕೆ.ಎಸ್., ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
ಖಾಸಗಿ ವಿಮೆಯಡಿ ಚಿಕಿತ್ಸೆಗೆ ವಿಶೇಷ ವಾರ್ಡ್‌ ಅನ್ನು ಬಳಸಿಕೊಳ್ಳಲಾಗಿದೆ. ಸರ್ಕಾರಿ ವಿಮಾ ಯೋಜನೆಗಳ ಜತೆಗೆ ಖಾಸಗಿ ವಿಮೆಯಡಿಯೂ ಚಿಕಿತ್ಸೆ ಪ್ರಾರಂಭಿಸಲಾಗಿದೆ
ಡಾ. ಮದನ್ ಬಲ್ಲಾಳ್, ಎಸ್‌ಜಿಐಟಿಒ, ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.