
ಬೆಂಗಳೂರು: ‘ಸರ್ಕಾರ ಸಂಗ್ರಹಿಸುವ ಸೆಸ್‌ಗೆ ಅನುಗುಣವಾಗಿ ಪುಸ್ತಕಗಳನ್ನು ಖರೀದಿಸಬೇಕು’ ಎಂದು ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್ ಒತ್ತಾಯಿಸಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಬುಧವಾರ ಆಯೋಜಸಿದ್ದ ವಿವಿಧ ಲೇಖಕರ ಪುಸ್ತಕಗಳ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಳೆದ ನಾಲ್ಕು ಐದು ವರ್ಷಗಳಿಂದ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿಯನ್ನು ಸ್ಥಗಿತಗೊಳಿಸಿದೆ. ಪ್ರತಿವರ್ಷ ರಾಜ್ಯ ಸರ್ಕಾರ ಪುಸ್ತಕಗಳನ್ನು ಖರೀದಿಸಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳಿಗೆ ತಲುಪಿಸಬೇಕು. ಇದರಿಂದ ಸ್ಥಳೀಯರಿಗೆ ಹೊಸ ಹೊಸ ಪುಸ್ತಕಗಳನ್ನು ಓದುವ ಅವಕಾಶ ಸಿಗಲಿದೆ. ಇತ್ತೀಚೆಗೆ ವಿವಿಧ ತಂತ್ರಜ್ಞಾನದ ಮೂಲಕ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ‘ರಾಜ್ಯ ಸರ್ಕಾರವು ಪುಸ್ತಕಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡಬೇಕು. ಈ ಬಗ್ಗೆ ಸಾಹಿತಿಗಳು ಧ್ವನಿ ಎತ್ತಬೇಕು. ಪ್ರಕಾಶಕರಿಗೆ ಪ್ರೋತ್ಸಾಹ ಸಿಗದಿರುವ ಕಾರಣ ಇಂದು ವಿವಿಧ ಕೃತಿಗಳ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
ಸಮಾರಂಭದಲ್ಲಿ ಐಬಿಎಚ್ ಪ್ರಕಾಶನದ ಎಚ್.ಕೆ. ಲಕ್ಷ್ಮೀನಾರಾಯಣ ಅಡಿಗ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ಸ್ವ್ಯಾನ್ ಕೃಷ್ಣಮೂರ್ತಿ ಹಾಗೂ ಕೆ.ಬಿ. ಪರಶಿವಪ್ಪ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.