ADVERTISEMENT

ಕೋಲಾರ ಚಿನ್ನದ ಗಣಿ ವಶ, ಶೀಘ್ರ ಕೇಂದ್ರಕ್ಕೆ ನಿಯೋಗ: ಸಂಸದ ಕೆ.ಎಚ್‌. ಮುನಿಯಪ್ಪ

‘₹1,600 ಕೋಟಿ ಬಾಕಿ ಪಾವತಿ ಬಗ್ಗೆ ಚರ್ಚೆ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 18:59 IST
Last Updated 13 ನವೆಂಬರ್ 2018, 18:59 IST

ಬೆಂಗಳೂರು: ‘ಕೋಲಾರದ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಕಂಪನಿಯನ್ನು (ಬಿಜಿಎಂಎಲ್‌) ರಾಜ್ಯ ಸರ್ಕಾರದ ವಶಕ್ಕೆ ಪಡೆಯುವ ಉದ್ದೇಶದಿಂದ ಶೀಘ್ರದಲ್ಲೇ ಕೇಂದ್ರದ ಗಣಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ತೀರ್ಮಾನಿಸಲಾಗಿದೆ’ ಎಂದು ಸಂಸದ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಕಂಪನಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುನಿಯಪ್ಪ, ‘ಹಸ್ತಾಂತರಿಸುವ ಮೊದಲು ₹ 1,600 ಕೋಟಿ ಬಾಕಿ ಪಾವತಿಸಬೇಕು ಎಂದು ಕೇಂದ್ರ ಷರತ್ತು ವಿಧಿಸಿದೆ. ಆದರೆ, ಅಷ್ಟೂ ಹಣವನ್ನು ವಜಾ ಮಾಡಿ ಭೂಮಿಯನ್ನು ಉಚಿತವಾಗಿ ನೀಡಬೇಕು ಎನ್ನುವುದು ರಾಜ್ಯದ ಬೇಡಿಕೆ’ ಎಂದರು.

‘ಬಿಜಿಎಂಎಲ್‌ ಸುಮಾರು 12 ಸಾವಿರ ಎಕರೆ ಪ್ರದೇಶದಲ್ಲಿದೆ. ಆದರೆ, ಒಂದು ಸಾವಿರದಿಂದ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆದಿದೆ. ಆ ಭೂಮಿ ವಶಕ್ಕೆ ಪಡೆದು ಉಳಿದ ಪ್ರದೇಶದಲ್ಲಿ ಕೈಗಾರಿಕೆ, ಟೌನ್‌ಶಿಪ್‌ ನಿರ್ಮಿಸುವ ಜೊತೆಗೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಗಿದೆ’ ಎಂದರು.

ADVERTISEMENT

‘ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಅದರ ಪ್ರಕಾರ ಗಣಿಗಾರಿಕೆ ಪ್ರದೇಶವನ್ನು ರಾಜ್ಯಗಳ ವಶಕ್ಕೆ ಒಪ್ಪಿಸಬೇಕು. ಬಿಜಿಎಂಎಲ್‌ ವಶಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಸಿದ್ಧವಿದೆ. ಕೇಂದ್ರ ಸುಮಾರು 130 ವರ್ಷ ಇಲ್ಲಿಂದ ಚಿನ್ನ ತೆಗೆದಿದೆ. ಟನ್‌ಗಟ್ಟಲೆ ಚಿನ್ನ ತೆಗೆದ ಬಳಿಕವೂ ಬಾಕಿ ಮೊತ್ತ ಪಾವತಿಸಬೇಕು ಎಂದು ಕೇಂದ್ರ ಬೇಡಿಕೆ ಮುಂದಿಟ್ಟಿರುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್‌, ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಜೊತೆ ಮತ್ತೊಮ್ಮೆ ಚರ್ಚಿಸಲಾಗುವುದು. ಆ ಬಳಿಕ, ನಿಯೋಗದೊಂದಿಗೆ ತೆರಳಿ ಬಿಜಿಎಂಎಲ್‌ ಭೂಮಿ ವಶಕ್ಕೆ ಪಡೆಯುವ ಕುರಿತು ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.