ADVERTISEMENT

ಮಳೆಗೂ ಮೊದಲು ರಸ್ತೆ ಗುಂಡಿ ಮುಚ್ಚಿ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 21:28 IST
Last Updated 26 ಏಪ್ರಿಲ್ 2021, 21:28 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   

ಬೆಂಗಳೂರು: ‘ಮುಂಗಾರು ಮಳೆ ಆರಂಭಕ್ಕೂ ಮೊದಲೇ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ರಸ್ತೆ ಬದಿಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದರು.

ಅಧಿಕಾರಿಗಳ ಜೊತೆ ವರ್ಚುವಲ್ ಸಭೆಯ ಮೂಲಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಪ್ರಸಕ್ತ ಸಾಲಿನಲ್ಲಿ ಒದಗಿಸಿದ ಅನುದಾನದಲ್ಲಿ ಶೇ 50ರಷ್ಟು ಮೊತ್ತವನ್ನು ಮುಂದುವರಿದ ಕಾಮಗಾರಿಗಳಿಗೆ ಬಳಸಬೇಕು. ಉಳಿದ ಮೊತ್ತವನ್ನು ಹೊಸ ಕಾಮಗಾರಿಗಳಿಗೆ ಮೀಸಲಿರಿಸಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಇಲಾಖೆಯ ಕಾಮಗಾರಿಗಳಿಗೆ ಕೋವಿಡ್ ನಿಯಮಗಳು ಅಡ್ಡಿಯಾಗುವುದಿಲ್ಲ. ಕೋವಿಡ್ ನಿಯಂತ್ರಣದ ಉದ್ದೇಶಕ್ಕೆ ನಿರ್ಮಿಸುವ ಕಟ್ಟಡ, ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕು. ಇದಕ್ಕೆ ಪೂರಕವಾದ ಪ್ರಸ್ತಾವನೆಗಳಿದ್ದರೆ ತಕ್ಷಣ ಸರ್ಕಾರಕ್ಕೆ ಸಲ್ಲಿಸಿದರೆ ಮಂಜೂರಾತಿ ನೀಡಲಾಗುವುದು’ ಎಂದರು.

ADVERTISEMENT

‘ಅನುಷ್ಠಾನದಲ್ಲಿರುವ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಪೂರ್ಣಗೊಳಿಸಬೇಕು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳುವ ಹಂತ 4ರ 2ನೇ ಹಂತದ ಕಾಮಗಾರಿಗಳಿಗೆ ಮೂರು ತಿಂಗಳ ಒಳಗೆ ಟೆಂಡರ್ ಕರೆದು ಕಾಮಗಾರಿಗಳನ್ನು ಆರಂಭಿಸಬೇಕು. ಕಳೆದ ಸೆಪ್ಟೆಂಬರ್‌ನಲ್ಲಿ ಮೇಲ್ದರ್ಜೆಗೇರಿಸಿದ ರಸ್ತೆಗಳ ನಿರ್ವಹಣೆಯನ್ನೂ ತ್ವರಿತವಾಗಿ ಅನುಷ್ಠಾನಗೊಳಿಸಬೇಕು’ ಎಂದೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.