ADVERTISEMENT

ಧ್ವನಿವರ್ಧಕ ಬಳಸಲು ಮಸೀದಿಗೆ ಅನುಮತಿ ನೀಡಿದ ಪೊಲೀಸರು: ವಿವರ ಕೇಳಿದ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 7:37 IST
Last Updated 29 ಫೆಬ್ರುವರಿ 2020, 7:37 IST
   

ಬೆಂಗಳೂರು: ಗೋವಿಂದರಾಜ ನಗರದ ಕಾರ್ಪೊರೇಷನ್‌ ಕಾಲೋನಿಯ ಆಯಷಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಸಲು ಪೊಲೀಸ್ ಇನ್‌ಸ್ಪೆಕ್ಟರ್ ನೀಡಿರುವ ಪರವಾನಗಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ಕುರಿತಂತೆ ಸ್ಪಷ್ಟನೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ವಕೀಲೆ ಸುಮಂಗಲಾ ಎ.ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ, ‘ಪೊಲೀಸ್ ಇನ್‌ಸ್ಪೆಕ್ಟರ್‌ ಯಾವ ಅಧಿಕಾರ ಬಳಸಿ ಈ ಪರವಾನಿಗೆ ನೀಡಿದ್ದಾರೆ ಎಂಬ ಬಗ್ಗೆ ಸ್ಪಷ್ಟಪಡಿಸಿ’ ಎಂದು ತಾಕೀತು ಮಾಡಿದೆ.

ಸರ್ಕಾರದ ಪರ ವಕೀಲರು, ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ 2015ರ ಮಾರ್ಚ್‌ 26ರಂದು ಮಸೀದಿಯ ಆಡಳಿತ ಮಂಡಳಿಗೆ ಧ್ವನಿವರ್ಧಕ ಬಳಸಲು ನೀಡಿರುವ ಅನುಮತಿ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

ಇದನ್ನು ಪರಿಶೀಲಿಸಿದ ನ್ಯಾಯಪೀಠ, ‘ಶಬ್ದ ಮಾಲಿನ್ಯ ನಿಯಂತ್ರಣ ಅಧಿನಿಯಮ-2000ರ ಅನ್ವಯ ಉಪ ಪೊಲೀಸ್ ಆಯುಕ್ತರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ಧ್ವನಿವರ್ಧಕ ಬಳಕೆಗೆ ಪರವಾನಿಗೆ ನೀಡಬಹುದು. ಆದರೆ, ಈ ಪ್ರಕರಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪರವಾನಿಗೆ ನೀಡಿದ್ದಾರೆ. ಆದರೆ, ನಿಗದಿತ ಅವಧಿಗೆ ಎಂಬುದನ್ನು ನಮೂದಿಸಿಲ್ಲ’ ಎಂದು ಆಕ್ಷೇಪಿಸಿದರು.

ಮಸೀದಿಯಲ್ಲಿ ಬಳಸಲಾಗುತ್ತಿರುವ ಧ್ವನಿವರ್ಧಕಗಳ ಶಬ್ದದ ‘ಡೆಸಿಬಲ್’ ಮಾಪನ ಮಾಡಿ ನ್ಯಾಯಾಲಯಕ್ಕೆ ವರದಿ ಕೊಡಲು ಒಬ್ಬ ಅಧಿಕಾರಿಯನ್ನು ನೇಮಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.