ADVERTISEMENT

₹4 ಲಕ್ಷ ಲಂಚ: ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು ಬಂಧನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 22:50 IST
Last Updated 29 ಜನವರಿ 2026, 22:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಡ್ಡಿ ವ್ಯವಹಾರ, ಚೆಕ್‌ಬೌನ್ಸ್‌ ಮತ್ತು ಹಣ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಪರವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ₹4 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ (ಪಿಐ) ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ.ಅಗ್ರಹಾರ ನಿವಾಸಿ ಉದ್ಯಮಿ ಮೊಹಮ್ಮದ್ ಅಕ್ಬರ್‌ ಎಂಬುವವರ ವಿರುದ್ಧ ಮಹಿಳೆಯೊಬ್ಬರು ಚೆಕ್‌ಬೌನ್ಸ್‌ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅಕ್ಬರ್‌ ಪರವಾಗಿ ವರದಿ ಸಲ್ಲಿಸಲು ಪಿಐ ಗೋವಿಂದರಾಜು ಅವರು ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹4 ಲಕ್ಷಕ್ಕೆ ಒಪ್ಪಿಕೊಂಡಿದ್ದರು. 

ADVERTISEMENT

ವಾಟ್ಸ್‌ಆ್ಯಪ್‌ ಕರೆಯ ಮೂಲಕ ಗೋವಿಂದರಾಜು ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಕ್ಬರ್ ಅವರು ತಮ್ಮ ಪತ್ನಿಯ ಫೋನ್‌ನಲ್ಲಿ ಅದೆಲ್ಲವನ್ನೂ ಚಿತ್ರೀಕರಿಸಿಕೊಂಡಿದ್ದರು. ಈ ಸಾಕ್ಷ್ಯದೊಂದಿಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 

ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ರೂಪಿಸಿದ್ದರು. ಗೋವಿಂದರಾಜು ಅವರು ಚಾಮರಾಜಪೇಟೆಯ ಸಿಎಆರ್‌ ಮೈದಾನದ ಬಳಿಗೆ ಬರಲು ಅಕ್ಬರ್‌ ಅವರಿಗೆ ಸೂಚಿಸಿದ್ದರು. ಅದರಂತೆ ಸ್ಥಳಕ್ಕೆ ತೆರಳಿದ್ದ ಅಕ್ಬರ್‌ ಹಣ ನೀಡುವ ವೇಳೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ. 

ಆರೋಪಿಯನ್ನು ಬಂಧಿಸಲಾಗಿದ್ದು, ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.