
ಬೆಂಗಳೂರು: ‘ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷನಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ವಜಾಗೊಳಿಸಿರುವುದು ಏಕೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ನಿರ್ಗಮಿತ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನೋಟಿಸ್ ಕೂಡಾ ನೀಡದೇ, ಯಾವುದೇ ವಿವರ ಪಡೆಯದೇ ಏಕಾಏಕಿ ವಜಾ ಮಾಡಿದ್ದರಿಂದ ದಿಗ್ಭ್ರಮೆಗೊಂಡಿದ್ದೇನೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಯಾಕೆ ಎಂಬುದು ತಿಳಿದಿಲ್ಲ’ ಎಂದರು.
‘ಯಾವ ಅಕಾಡೆಮಿಗಳೂ ಮಾಡದಷ್ಟು ಕೆಲಸವನ್ನು ನಾನು ಮಾಡಿದ್ದೆ. ಸಂತ ಸೇವಾಲಾಲ್ ಹೆಸರಲ್ಲಿ ಪ್ರಶಸ್ತಿ ಆರಂಭಿಸಿದೆ. ಮೊದಲ ಪ್ರಶಸ್ತಿಗೆ ನಮ್ಮ ಸಮಾಜದಲ್ಲಿ ಅತ್ಯಂತ ಸೂಕ್ತರಾದ ಬಿ.ಟಿ. ಲಲಿತಾ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲಿಂದ ವಿವಾದ ಶುರುವಾಯಿತು. ಪ್ರಶಸ್ತಿಗಾಗಿ ಆಸೆ ಇಟ್ಟುಕೊಂಡಿದ್ದ ಅನೇಕರು ವಿವಾದ ಸೃಷ್ಟಿಸಿದರು. ರುದ್ರಪ್ಪ ಲಮಾಣಿ ಅವರು ರೂಪ್ಲಾ ನಾಯಕ್ ಹೆಸರನ್ನು ಪರಿಗಣಿಸುವಂತೆ ಪತ್ರ ಬರೆದಿದ್ದರು. ಎಲ್ಲ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಪತ್ರ ಬಂದಿದ್ದರಿಂದ ಮುಂದಿನ ವರ್ಷ ಪರಿಗಣಿಸಲಾಗುವುದು ಎಂದು ತಿಳಿಸಿದ್ದೆ. ವಜಾ ಮಾಡಲು ಇದೂ ಕಾರಣವೇ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.
‘ನನ್ನ ಮೇಲೆ ವಿಶ್ವಾಸ ಇಟ್ಟು ಸಿದ್ದರಾಮಯ್ಯ ಈ ಸ್ಥಾನ ನೀಡಿದ್ದರು. ಆದರೆ, ನಾನು ಮಾಡಿದ ಕೆಲಸಗಳು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ತಲುಪಲು ಕೆಲವರು ಬಿಟ್ಟಿಲ್ಲ. ಬಂಜಾರ ಸಮುದಾಯದ ಕೆಲವು ಸ್ವಯಂಘೋಷಿತ ನಕಲಿ ನಾಯಕರ ಪಿತೂರಿಯಿಂದ ಹೀಗಾಗಿದೆ’ ಎಂದರು.
‘ಗೋವಿಂದ ಸ್ವಾಮಿ ಅವರನ್ನೇ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು’ ಎಂದು ಹೋರಾಟಗಾರರಾದ ರೇವತಿರಾಜ್, ನಾಗೇಶ್, ಸುರೇಂದ್ರ, ವಡ್ಡಗೆರೆ ನಾಗರಾಜಯ್ಯ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.