ADVERTISEMENT

ಆರ್ಥಿಕ ಬಿಕ್ಕಟ್ಟು– ಮಂಜೂರಾದ ಕಾಮಗಾರಿಗಳಿಗೆ ಕತ್ತರಿ?

ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 20:33 IST
Last Updated 4 ಅಕ್ಟೋಬರ್ 2020, 20:33 IST
ಬಿಬಿಎಂಪಿ
ಬಿಬಿಎಂಪಿ   
""

ಬೆಂಗಳೂರು: ಬಿಬಿಎಂಪಿಯು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದರಿಂದ ಈಗಾಗಲೇ ಮಂಜೂರಾಗಿರುವ, ಟೆಂಡರ್‌ ಆಗಿಯೂ ಆರಂಭವಾಗಿರದ ಹಾಗೂ ಕಾರ್ಯಾದೇಶ ನೀಡದ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಅಥವಾ ಮುಂದೂಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ.

ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತರು ಪಾಲ್ಗೊಂಡ ವಿಶೇಷ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಪ್ರಸ್ತಾವನೆ ಸಿದ್ಧಗೊಂಡಿದೆ. ಈಗಾಗಲೇ ಕಾಮಗಾರಿ ಸಂಖ್ಯೆ (ಜಾಬ್‌ಕೋಡ್‌) ನೀಡಲಾಗಿದ್ದರೆ ಅವುಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿಯಲ್ಲಿ 2010–11ರಿಂದಲೂ ಪಾಲಿಕೆ ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ವರಮಾನ ಬರುತ್ತಿಲ್ಲ. ಆದರೆ, ಬಜೆಟ್‌ನಲ್ಲಿ ವೆಚ್ಚಕ್ಕೆ ನಿಗದಿಪಡಿಸಿದ ಅಷ್ಟೂ ಯೋಜನೆಗಳಿಗೆ ಕಾಮಗಾರಿ ಸಂಖ್ಯೆ ನೀಡಲಾಗುತ್ತಿದೆ. ಇದರಿಂದಾಗಿ ಪ್ರತಿವರ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ. ಪೂರ್ಣಗೊಂಡ ಕಾಮಗಾರಿಗಳಿಗೆ ಒಟ್ಟು ₹2,575.25 ಕೋಟಿ ಬಿಲ್‌ ಪಾವತಿ ಬಾಕಿ ಇದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ₹ 286 ಕೋಟಿ ಸಾಲವಿದೆ.

ADVERTISEMENT

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಸೆ.5ರಂದು ಪತ್ರ ಬರೆದಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಪಾಲಿಕೆಯ ಆರ್ಥಿಕ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ‘ಬಿಬಿಎಂಪಿಯಲ್ಲಿ 2020–21ನೇ ಸಾಲಿನಲ್ಲಿ ಅನುಮೋದನೆಗೊಂಡ ಬಜೆಟ್‌ ಗಾತ್ರ ₹ 10,717 ಕೋಟಿ. ಆದರೆ, ಈ ಸಾಲಿನಲ್ಲಿ ಪಾಲಿಕೆ ಎದುರಿಸುತ್ತಿರುವ ಒಟ್ಟು ಆರ್ಥಿಕ ಹೊರೆ ₹ 22,657 ಕೋಟಿ. ಆದಾಯ ಸಂಗ್ರಹ ಕುಸಿಯುತ್ತಿರುವುದರಿಂದ ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ‘ ಎಂದು ವಿವರಿಸಿದ್ದರು.

₹ 22,657 ಕೋಟಿ ವೆಚ್ಚದ ಕಾಮಗಾರಿಗಳಲ್ಲಿ ₹11,802 ಕೋಟಿ ವೆಚ್ಚದ ಕಾಮಗಾರಿಗಳು ಇನ್ನಷ್ಟೇ ಆರಂಭವಾಗಬೇಕಿವೆ. ಈ ಪೈಕಿ ₹ 10,450 ಕೋಟಿಗಳಷ್ಟು ಮೊತ್ತದ ಕಾಮಗಾರಿ ರಾಜ್ಯ ಸರ್ಕಾರದ ಅನುದಾನ ಮತ್ತು ಬಿಬಿಎಂಪಿ ಅನುದಾನದಲ್ಲೇ ಕೈಗೊಳ್ಳಬೇಕಿದೆ.

ಕೋವಿಡ್‌ ವ್ಯಾಪಿಸಿದ ಬಳಿಕ ರಾಜ್ಯ ಸರ್ಕರ ಹಾಗೂ ಬಿಬಿಎಂಪಿಯ ವರಮಾನದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇದು ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಸದ್ಯಕ್ಕೆ ಅಷ್ಟೇನೂ ಅಗತ್ಯವಿಲ್ಲದ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರ ಬೀಳಲಿದೆ. ಹಣಕಾಸಿನ ಮುಗ್ಗಟ್ಟು ಇರುವ ಈ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೂ ಸಮಸ್ಯೆ ಆಗಲಿದೆ. ಹಾಗಾಗಿ ಅನಗತ್ಯವಾಗಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರ ಬದಲು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಮಂಜೂರಾತಿ ಪಡೆದು ಇನ್ನೂ ಆರಂಭವಾಗದ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವುದು ಅಥವಾ ಮುಂದೂಡಬೇಕು ಎಂಬ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆದಿದೆ.

ಈ ಹಿಂದೆ ಆಗಿರುವ ಕಾಮಗಾರಿಗಳನ್ನುರಸ್ತೆ ಇತಿಹಾಸದ ಆಧಾರದಲ್ಲಿ ಪರಾಮರ್ಶೆ ನಡೆಸಿ ಅಗತ್ಯಬಿದ್ದರೆ ಮಾತ್ರ ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಯಾವುದಾದರೂ ಅನುದಾನದಲ್ಲಿ ರಾಜಕಾಲುವೆ ಅಭಿವೃದ್ಧಿ ಹಾಗೂ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದರೆ ಅಲ್ಲಿ ಮತ್ತೆ ಕಾಮಗಾರಿ ಕೈಗೊಳ್ಳದಿರುವ ಬಗ್ಗೆಯೂ ಚಿಂತನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.