ADVERTISEMENT

ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ: ಆರ್‌. ಅಶೋಕ

ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 21:07 IST
Last Updated 11 ಆಗಸ್ಟ್ 2022, 21:07 IST
   

ಬೆಂಗಳೂರು: ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಇದೇ 15 ರಂದು ಧ್ವಜಾರೋಹಣವನ್ನು ಸರ್ಕಾರದ ವತಿಯಿಂದ ಉಪವಿಭಾಗಾಧಿಕಾರಿ ನೆರವೇರಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ವಿಷಯ ವಿವಾದದ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಸಚಿವ ಅಶೋಕ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. ಸಭೆಯ ತೀರ್ಮಾನವನ್ನು ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಮೈದಾನದಲ್ಲಿ ಯಾವುದೇ ಸಂಘ– ಸಂಸ್ಥೆಗಳಿಗೂ ಧ್ವಜಾರೋಹಣಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

‘ಸರ್ಕಾರದ ನಿಯಮಗಳ ಪ್ರಕಾರ ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಶಾಸಕ ಜಮೀರ್‌ ಅಹಮದ್‌ ಅವರಾಗಲಿ ಇತರ ಯಾವುದೇ ವ್ಯಕ್ತಿಗಳಿಗೂ ಧ್ವಜಾರೋಹಣ ಮಾಡು ವಂತಿಲ್ಲ. ಸಾರ್ವಜನಿಕರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಮೈದಾನದ ಸುತ್ತಮುತ್ತ ಪೊಲೀಸ್‌ ಬಂದೋಬಸ್ತ್‌ ಇರುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಜತೆ ಸುದೀರ್ಘ ಚರ್ಚೆ ಮಾಡಿದ್ದೇನೆ’ ಎಂದು ಅಶೋಕ ತಿಳಿಸಿದರು.

ADVERTISEMENT

‘ಕಂದಾಯ ಇಲಾಖೆಯ ಅಧಿಕಾರಿಗಳು, ಕಾನೂನು ತಜ್ಞರ ಜತೆ ಈ ಮೈದಾನಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಚರ್ಚೆ ನಡೆಸಿದ್ದೇನೆ. ಮೂಲತಃ ಈ ಜಮೀನು ಕಂದಾಯ ಇಲಾಖೆಗೆ ಸೇರಿದ್ದು, ‘40 ಗುಟ್ಟಹಳ್ಳಿ, ಚಾಮರಾಜಪೇಟೆ ಕಂದಾಯ ಇಲಾಖೆ’ ಎಂಬ ಸ್ಪಷ್ಟ ಉಲ್ಲೇಖವಿದ್ದು, ಅದೇ ಹೆಸರಿನಲ್ಲೇ ಜಮೀನು ಅಸ್ತಿತ್ವದಲ್ಲಿದೆ. ಬೇರೆ ಯಾವುದೇ ಹೆಸರು ಇಲ್ಲ. ಈ ಜಾಗವನ್ನು ಮುಂದೆ ಬಿಬಿಎಂಪಿಗೆ ಕೊಡಬೇಕಾ, ಬಿಡಿಎಗೆ ಹಸ್ತಾಂತರಿಸಬೇಕಾ ಅಥವಾ ಕಂದಾಯ ಇಲಾಖೆಯಲ್ಲೇ ಉಳಿಸಿಕೊಳ್ಳಬೇಕಾ ಎಂಬ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ. ಅಲ್ಲಿ ಈಗ ಇರುವ ಎಲ್ಲ ರಚನೆಗಳೂ (ಗೋಡೆ) ಹಾಗೇ ಮುಂದುವರಿಯುತ್ತವೆ. ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ’ ಎಂದು ಅವರು ತಿಳಿಸಿದರು.

ಈ ಜಮೀನನ್ನು ಕಂದಾಯ ಇಲಾಖೆ ಯಾವುದೇ ಸಂಘ–ಸಂಸ್ಥೆಗಳಿಗೂ ಹಸ್ತಾಂತರ ಮಾಡಿಲ್ಲ. ಈ ಹಿಂದೆ ಸುಪ್ರೀಂಕೋರ್ಟ್‌ ಈ ಜಾಗದಲ್ಲಿ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಹೇಳಿತ್ತು. ಈಗ ಜಮೀನು ಕಂದಾಯ ಇಲಾಖೆ ಸುಪರ್ದಿಗೆ ಬಂದಿರುವುದರಿಂದ ಅಲ್ಲಿ ಧಾರ್ಮಿಕ ಚಟುವಟಿಕೆಗಳೂ ಸೇರಿ ಯಾವ ಯಾವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಶೋಕ ಹೇಳಿದರು.

‘ಈ ಜಾಗದ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ಇವೆಲ್ಲ ಅಂಶಗಳನ್ನೂ ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಈಬಗ್ಗೆ ಯಾವುದೇ ಸಂಘ–ಸಂಸ್ಥೆಗಳಿಗೆ ಆಕ್ಷೇಪ ಇದ್ದರೆ ನ್ಯಾಯಾಲಯಕ್ಕೆ ಹೋಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.