ADVERTISEMENT

ಸೊಣ್ಣಪ್ಪನಹಳ್ಳಿ: ಸರ್ಕಾರಿ ಜಮೀನು ಕಬಳಿಕೆ ಆರೋಪ

ಭೂಕಬಳಿಕೆದಾರರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 22:35 IST
Last Updated 10 ಏಪ್ರಿಲ್ 2021, 22:35 IST
ಸೊಣ್ಣಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿರುವ ಶೆಡ್‌ ಹಾಗೂ ಮಳಿಗೆಗಳು
ಸೊಣ್ಣಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿರುವ ಶೆಡ್‌ ಹಾಗೂ ಮಳಿಗೆಗಳು   

ಬೆಂಗಳೂರು: ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ಕೆಲವರು ಕಬಳಿಸಿ, ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಬಳಿಕೆಯಾಗಿರುವ ಎಕರೆಗಟ್ಟಲೆ ಸರ್ಕಾರಿ ಜಮೀನನ್ನು ಕೂಡಲೇ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

‘ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 20ರಲ್ಲಿರುವ ಒಂದು ಎಕರೆ 34 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನು ಕಬಳಿಕೆಯಾಗಿದೆ. ಗ್ರಾಮದ ಸುನೀಲ್ ಎಂಬುವರುಈ ಜಾಗದಲ್ಲಿ ಶೆಡ್‌, ಮಳಿಗೆ, ಕ್ಲಬ್ ಹಾಗೂ ಸಿಮೆಂಟ್ ಇಟ್ಟಿಗೆ ತಯಾರಿಸುವ ಕಾರ್ಖಾನೆ ನಿರ್ಮಿಸಿ, ಅವುಗಳಿಂದ ಬಾಡಿಗೆ ಪಡೆಯುತ್ತಿದ್ದಾರೆ. ಇವೆಲ್ಲವೂ ಅಕ್ರಮ’ ಎಂದು ಗ್ರಾಮದ ನಿವಾಸಿ ಕೆ.ಮುನಿರಾಜು ಆರೋಪಿಸಿದರು.

ADVERTISEMENT

‘ಗ್ರಾಮದ ಮೂಲ ನಕ್ಷೆ ಹಾಗೂ ದಾಖಲೆಗಳಲ್ಲಿ ಈ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದೇ ಉಲ್ಲೇಖವಾಗಿದೆ. ಆದರೂ, ಜಮೀನನ್ನು ಕಬಳಿಸಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ‘ಅದೆಲ್ಲ ಕೇಳಲು ನೀನ್ಯಾರು? ಎಂದು ಏರುಧ್ವನಿಯಲ್ಲಿ ಕೇಳುತ್ತಾರೆ. ಈ ರೀತಿ ಅಕ್ರಮವಾಗಿ ಸರ್ಕಾರಿ ಜಮೀನನ್ನು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಈ ಜಮೀನು ಒತ್ತುವರಿಯಾಗಿರುವ ಕುರಿತು 2001ರಲ್ಲೇ ಅಂದಿನ ವಿಶೇಷ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತ್ತು. ಸ್ಥಳ ಪರಿಶೀಲಿಸಿದ್ದ ಅಧಿಕಾರಿಗಳು, ಬೋಗಸ್ ದಾಖಲೆ ರದ್ದುಗೊಳಿಸಿ, ಇದು ಸರ್ಕಾರದ ಸ್ವತ್ತು ಎಂದು ಆದೇಶಿಸಿದ್ದರು. ಅದಾದ ಬಳಿಕ ಯಾರೂ ಈ ಜಾಗದ ಕಡೆಗೆ ಬಂದಿರಲಿಲ್ಲ. ಹಾಗಾಗಿ, ಇಲ್ಲಿ ರಾಜಾರೋಷವಾಗಿ ಒತ್ತುವರಿ ನಡೆದಿದೆ. ಒತ್ತುವರಿದಾರರು ಜನರ ಬಾಯಿ ಮುಚ್ಚಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದರೆ, ಮೂಲ ದಾಖಲೆಗಳಲ್ಲಿ ಇದು ಸರ್ಕಾರದ ಜಮೀನು ಎಂದೇ ಇದೆ’ ಎಂದು ಗ್ರಾಮಸ್ಥ ಲಕ್ಷ್ಮಣ್ ವಿವರಿಸಿದರು.

‘ಸರ್ಕಾರಿ ಜಮೀನು ಕಬಳಿಕೆ ಆಗಿರುವ ಕುರಿತು ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಸ್ಥಳ ಪರಿಶೀಲಿಸಿ, ಸರ್ಕಾರಿ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಈ ವ್ಯಾಪ್ತಿಯ ಉಪ ತಹಶೀಲ್ದಾರ್‌ ಅವರಿಗೂ ದಾಖಲೆಗಳ ಸಹಿತ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಸ್ಪಂದಿಸಿರುವಉಪ ತಹಶೀಲ್ದಾರ್‌ ಅವರು ಒತ್ತುವರಿ ತೆರವುಗೊಳಿಸಿ, ಜಾಗಕ್ಕೆ ಕಾಂಪೌಡ್ ನಿರ್ಮಿಸುವ ಭರವಸೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಅನ್ಯಾಯವನ್ನು ತಡೆಯಬೇಕು. ಸರ್ಕಾರಿ ಜಮೀನನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಗ್ರಾಮದ ನಿವಾಸಿ ಕುಮಾರ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.