ADVERTISEMENT

‘ಉಳುವವರ ಬದಲಿಗೆ ಉಳ್ಳವರಿಗೆ ಭೂಮಿ’

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 9:59 IST
Last Updated 14 ಜೂನ್ 2020, 9:59 IST

ಬೆಂಗಳೂರು: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ‘ಉಳುವವನಿಗೆ ಭೂಮಿ’ ಎಂಬ ಆಶಯಕ್ಕೆ ಬದಲಾಗಿ‘ಉಳ್ಳವರಿಗೆ ಭೂಮಿ’ ಕೊಡಿಸಲುರಾಜ್ಯ ಸರ್ಕಾರ ಮುಂದಾಗಿದೆ ಎಂದು ಗ್ರಾಮ ಸೇವಾ ಸಂಘ ಹೇಳಿದೆ.

‘ಕೋವಿಡ್–19 ನೆಪದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳ ಸರಮಾಲೆಯನ್ನು ಆತುರವಾಗಿ ಜಾರಿಗೊಳಿಸುತ್ತಿವೆ. ಕೃಷಿ ಪ್ಯಾಕೇಜ್ ಹೆಸರಿನಲ್ಲಿ ಕಾರ್ಪೊರೇಟ್‍ ಕೃಷಿ ಪ್ರೋ‌ತ್ಸಾಹಿಸಲು ಸರ್ಕಾರ ಹವಣಿಸುತ್ತಿದೆ’ ಎಂದು ಸಂಘದ ಅಧ್ಯಕ್ಷ ಸಿ.ಯತಿರಾಜು ದೂರಿದ್ದಾರೆ.

‘‌ಕರ್ನಾಟಕ ಭೂಸುಧಾರಣ ಕಾಯ್ದೆ–1961ಕ್ಕೆ ತಿದ್ದುಪಡಿತಂದು ಪ್ರಗತಿಪರ, ರೈತಪರ ಆಶಯಗಳಿಗೆ ಎಳ್ಳು ನೀರು ಬಿಡಲು ರಾಜ್ಯ ಸರ್ಕಾರ ಹೊರಟಿದೆ. ಕೃಷಿಕರ ಕೈಯಿಂದ ಭೂಮಿ ಕೈಜಾರಿ ಹೋಗುವಂತೆ ಮಾಡಲಾಗುತ್ತಿದೆ.ನವಕಾರ್ಪೊರೇಟ್‍ ಜಮೀನ್ದಾರಿ ಪದ್ಧತಿಯನ್ನು ಜಾರಿಗೊಳಿಸಿ ದೇವರಾಜ್ ಅರಸು ಅವರು ಜಾರಿಗೆ ತಂದಿದ್ದ 1974ರ ಭೂಸುಧಾರಣಾ ಆಶಯಗಳನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಾರ್ಪೊರೇಟ್ ಪಾಳೇಗಾರಿಕೆಯ ಕೃಷಿ ಅತ್ಯಂತ ವಿನಾಶಕಾರಿ. ಈ ತಿದ್ದುಪಡಿಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಭೂರಹಿತರಿಗೆ, ವಸತಿರಹಿತರಿಗೆ ಭೂಮಿ ಹಂಚಬೇಕು. ವಲಸೆ ಹೋಗುವುದನ್ನು ತಪ್ಪಿಸಿ, ಜನಪರ, ಜೀವಪರ, ಪರಿಸರಸ್ನೇಹಿ ಪವಿತ್ರ ಆರ್ಥಿಕತೆಯತ್ತ ಯೋಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.