ADVERTISEMENT

ಹುತಾತ್ಮ ಯೋಧರಿಗೆ ಗೌರವ

ವೈಟ್‌ಫೀಲ್ಡ್‌ ನಿವಾಸಿಗಳಿಂದ ಮೇಣದ ದೀಪದ ಬೆಳಕಿನೊಂದಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:28 IST
Last Updated 17 ಫೆಬ್ರುವರಿ 2019, 20:28 IST
ಪುಲ್ವಾಮಾ ದಾಳಿ ಖಂಡಿಸಿ ಬೆಳ್ಳಂದೂರು ನಿವಾಸಿಗಳು ಪ್ರತಿಭಟನೆ ನಡೆಸಿದರು
ಪುಲ್ವಾಮಾ ದಾಳಿ ಖಂಡಿಸಿ ಬೆಳ್ಳಂದೂರು ನಿವಾಸಿಗಳು ಪ್ರತಿಭಟನೆ ನಡೆಸಿದರು   

ಬೆಂಗಳೂರು: ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಮೇಣದ ದೀಪದ ಬೆಳಕಿನೊಂದಿಗೆ ಶಾಂತಿಯುತ ಜಾಥಾ ವೈಟ್‌ಫೀಲ್ಡ್‌ನಲ್ಲಿ ಭಾನುವಾರ ನಡೆಯಿತು. ಸುತ್ತಮುತ್ತಲಿನ 1,000 ಹೆಚ್ಚು ನಿವಾಸಿಗಳು ಪಾಲ್ಗೊಂಡಿದ್ದರು.

ವೈಟ್‌ಫೀಲ್ಡ್‌, ಕಾಡುಗೋಡಿ, ದೊಡ್ಡನೆಕ್ಕುಂದಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು 5 ಕಿ.ಮೀ.ವರೆಗಿನ ಜಾಥಾದಲ್ಲಿ ಸಾಗಿದರು. ಕಾಡುಗೋಡಿಯ ಸೇತುವೆಯಿಂದ ಆರಂಭವಾದ ಈ ಜಾಥಾ ವೈಟ್‌ಫೀಲ್ಡ್‌ನಲ್ಲಿ ಇರುವ ಸೈನಿಕರ ಅಪಾರ್ಟ್‌ಮೆಂಟ್‌ ‘ಸಂದೀಪ್‌ ವಿಹಾರ್‌’ನಲ್ಲಿ ಕೊನೆಗೊಂಡಿತು.

ಪ್ರತಿಭಟನಾರ್ಥವಾಗಿ ಅವರಲ್ಲಿ ಬಹುತೇಕರು ಕಪ್ಪು ಬಟ್ಟೆಗಳನ್ನೇ ಧರಿಸಿದ್ದರು.

ADVERTISEMENT

ಆದಷ್ಟು ಪಾದಚಾರಿ ಮಾರ್ಗದ ಮೇಲೆಯೇ ಜಾಥಾ ಸಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚೇನೂ ತೊಂದರೆ ಆಗಲಿಲ್ಲ.

ಉಗ್ರರ ದಮನಕ್ಕೆ ಆಗ್ರಹ: ಉಗ್ರರದಾಳಿಯನ್ನು ಖಂಡಿಸಿ ಬೆಳ್ಳಂದೂರು ನಿವಾಸಿಗಳು ಸಹ ಪ್ರತಿಭಟನೆ ನಡೆಸಿದರು.

ಹೊರವರ್ತುಲ ರಸ್ತೆ ಬದಿ ಜಮಾಯಿಸಿದ್ದ ನೂರಾರು ನಿವಾಸಿಗಳು ರಸ್ತೆ ಉದ್ದಕ್ಕೂ ಮಾನವ ಸರಪಳಿ ರಚಿಸಿ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ‘ಭಾರತ್ ಮಾತಾಕಿ ಜೈ, ವಂದೇ ಮಾತರಂ’ ಘೋಷಣೆಗಳು ಮೊಳಗಿದವು. ‘ಸೇನೆಯೊಂದಿಗೆ ನಾವಿದ್ದೇವೆ’ ಎನ್ನುವ ಫಲಕಗಳನ್ನು ಪ್ರದರ್ಶಿಸಿದರು.

‘ದೇಶದೊಳಗಿರುವ ಉಗ್ರರನ್ನು ದಮನ ಮಾಡಬೇಕು. ರಕ್ಷಣೆಯ ವಿಷಯದಲ್ಲಿ ರಾಜಕೀಯ ಮಾಡಬಾರದು. ಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು’ ಎಂಬ ಬೇಡಿಕೆಗಳಈಡೇರಿಕೆಗೆ ಆಗ್ರಹಿಸಿ ಬೆಳ್ಳಂದೂರು ಅಭಿವೃದ್ಧಿ ವೇದಿಕೆಯು ಸಂಸದ ರಾಜೀವ್‌ ಚಂದ್ರಶೇಖರ್‌ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರ ಮುಖಾಂತರ ರಕ್ಷಣಾ ಮತ್ತು ವಿದೇಶಾಂಗ ಸಚಿವರಿಗೆ ಮನವಿ ಪತ್ರರವಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.