
ನಗರದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಸಚಿವ ಶಿವರಾಜ ಎಸ್. ತಂಗಡಗಿ ಶ್ರೀ ಕೃಷ್ಣ ಮತ್ತು ಅಂಬಿಗ ಚೌಡಯ್ಯ ಅವರ ವೇಷಭೂಷಣ ಧರಿಸಿ ಬಂದಿದ್ದ ಪುಟಾಣಿಗಳಾದ ಹೊಸಪೇಟೆಯ ನಯನಿಕ ಗೌಡ ಜಿ. ಮತ್ತು ಕೆ.ಆರ್. ವೈಷ್ಣವಿ ಅವರೊಂದಿಗೆ ಮಾತುಕತೆ ನಡೆಸಿದರು.
ಬೆಂಗಳೂರು: ‘ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಹಾಪುರುಷರ ಜಯಂತಿ ಆಚರಿಸಲು ಸರ್ಕಾರ ನೀಡುತ್ತಿರುವ ಅನುದಾನ ದುರುಪಯೋಗಪಡಿಸಿಕೊಂಡರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಇಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅನುದಾನ ದುರುಪಯೋಗ ಕುರಿತು ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅವರು ಪ್ರಸ್ತಾಪಿಸಿದರು. ಇದಕ್ಕೆ ಭಾಷಣದ ವೇಳೆ ಸಚಿವರು ಪ್ರತಿಕ್ರಿಯಿಸಿದರು.
‘ವಿವಿಧ ಸಮುದಾಯಗಳ ಮಹಾಪುರುಷರಿಗೆ ಗೌರವ ಸೂಚಿಸಬೇಕು. ಅವರ ವಿಚಾರಗಳನ್ನು ಜನರಿಗೆ ಮುಟ್ಟಿಸಬೇಕು ಎಂದು ನಮ್ಮ ಸರ್ಕಾರ ಜಯಂತಿಯನ್ನು ಆಚರಿಸುತ್ತಿದೆ. 2014ರಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆರಂಭಿಸಲಾಗಿದೆ. ಇದಕ್ಕಾಗಿ ಮೂರು ಹಂತಗಳಲ್ಲಿ ಅನುದಾನ ನೀಡುತ್ತಿದ್ದು, ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ರಾಜ್ಯದ ಇತಿಹಾಸದಲ್ಲೇ ಯಾವುದೇ ಸರ್ಕಾರ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ₹1,500 ಕೋಟಿಯನ್ನು ನಿಗಮಗಳಿಗೆ ನೀಡಿ ಆಯಾ ಸಮುದಾಯಗಳ ಅಭಿವೃದ್ದಿಗೆ ಒತ್ತು ನೀಡಿದೆ. ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೂ ₹23.73 ಕೋಟಿ ಅನುದಾನ ಒದಗಿಸಿದ್ದೇವೆ. ಅಂಬಿಗರ ಚೌಡಯ್ಯ ಅವರ ಮೂರ್ತಿ ನಿರ್ಮಿಸುವ ಬೇಡಿಕೆಯಿದ್ದು, ಆದಷ್ಟು ಬೇಗನೇ ಈಡೇರಿಸಲಾಗುವುದು’ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ‘ನಿಜ ಶರಣ ಎನ್ನುವ ಬಿರುದನ್ನು ಪಡೆದ ಮೊದಲ ದಾರ್ಶನಿಕರು ಚೌಡಯ್ಯನವರು. ಜಾತಿ ತಾರತಮ್ಯ ವಿರೋಧಿಸಿ ಹೋರಾಟ ರೂಪದಲ್ಲಿ ವಚನಗಳನ್ನು ರಚಿಸಿದವರು. ಅವರ 330 ವಚನಗಳು ದೊರೆತಿದ್ದು, ಇನ್ನಷ್ಟು ಸಂಗ್ರಹಿಸಲಾಗುತ್ತಿದೆ ಎಂದರು.
ದಾವಣಗೆರೆಯ ಪ್ರಾಧ್ಯಾಪಕ ಎಚ್.ಸ್ವಾಮಿ ಉಪನ್ಯಾಸ ನೀಡಿದರು. ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕಿ ಕೆ.ಎಂ.ಗಾಯತ್ರಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಆದರೆ ನನಗೆ ನಿದ್ರೆ ಮಾಡಲು ಬಿಡದ ಇಲಾಖೆ ಇದುಶಿವರಾಜ ತಂಗಡಗಿ ಸಚಿವ
ಹೆಚ್ಚಿನ ಅನುದಾನ ಕೊಡಿ
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗಂಗಾಧರ್ ಮಾತನಾಡಿ ‘ರಾಜ್ಯದಲ್ಲಿ ಅಂಬಿಗ ಸಮುದಾಯದವರೇ 25 ಲಕ್ಷದಷ್ಟಿದ್ದಾರೆ. ಸಮುದಾಯದ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಇದರಿಂದ ಸ್ವ ಉದ್ಯೋಗ ಕಂಡುಕೊಳ್ಳಲು ದಾರಿಯಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.