ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಿಗೆ ವಾರ್ಡ್‌ಗಳ ಮರು ವಿಂಗಡಣೆಯನ್ನು ಅಂತಿಮಗೊಳಿಸಿ, ನಗರಾಭವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಕರಡು ಅಧಿಸೂಚನೆಯಲ್ಲಿ 111 ವಾರ್ಡ್‌ಗಳಿದ್ದವು. ಅಂತಿಮ ಅಧಿಸೂಚನೆಯಲ್ಲಿ ಈ ಸಂಖ್ಯೆ 112ಕ್ಕೇರಿದೆ. ಇನ್ನುಳಿದ ನಾಲ್ಕು ನಗರ ಪಾಲಿಕೆಗಳ ವಾರ್ಡ್ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ. ಐದು ನಗರ ಪಾಲಿಕೆಗಳಲ್ಲಿ ಒಟ್ಟಾರೆ 369 ವಾರ್ಡ್‌ಗಳಿವೆ.
ಬಿಬಿಎಂಪಿ ಇರುವಾಗ ಹಲವು ಬಾರಿ ವಾರ್ಡ್ ಗಡಿ ಪುನಾರಚಿಸುವ ಪ್ರಯತ್ನಗಳಾಗಿದ್ದವು. 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಲಾಗಿತ್ತು. ಮತ್ತೆ 225ಕ್ಕೆ ಇಳಿಸಲಾಗಿತ್ತು. ಜಿಬಿಎ ಆದ ಬಳಿಕ ಐದು ಪಾಲಿಕೆಗಳನ್ನು ರಚಿಸಲಾಗಿತ್ತು. ಸೆಪ್ಟೆಂಬರ್ 2 ರಂದು ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದವು. ಸೆಪ್ಟೆಂಬರ್ 30ರಂದು ವಾರ್ಡ್‌ಗಳ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ನವೆಂಬರ್ 1ಕ್ಕೆ ಅಂತಿಮ ಅಧಿಸೂಚನೆಯಾಗಬೇಕಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿನ ಮನವಿ ಕೋರಿದ್ದರೂ ಫಲಿಸಲಿಲ್ಲ. 15 ದಿನದಲ್ಲಿ ವಾರ್ಡ್‌ಗಳನ್ನು ಅಂತಿಮಗೊಳಿಸಿ ಎಂದು ಸುಪ್ರೀಂ ಕೋರ್ಟ್ ನ.4ರಂದು ಸೂಚಿಸಿತ್ತು. ಅದರಂತೆ, ವಾರ್ಡ್‌ಗಳ ಅಂತಿಮ ಅಧಿಸೂಚನೆ ಹೊರಬಿದ್ದಿದೆ.
‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ ಮೇ 15ರಂದು ಜಾರಿಯಾಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಉನ್ನತ ಸಂಸ್ಥೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲು ಐದು ನಗರಪಾಲಿಕೆಗಳು ಮತ್ತು ವಾರ್ಡ್ ಸಮಿತಿ ಹೀಗೆ ಮೂರು ಹಂತದ ಆಡಳಿತವನ್ನು ಈ ಕಾಯ್ದೆ ಮೂಲಕ ಪರಿಚಯಿಸಲಾಯಿತು.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ವಾರ್ಡ್ ಪುನರ್‌ರಚನಾ ಸಮಿತಿಯನ್ನು ರಚಿಸಲಾಯಿತು. 2011ರ ಜನಗಣತಿ ಮತ್ತು ಇತ್ತೀಚಿನ ಜನಸಂಖ್ಯೆಯನ್ನು ಪರಿಗಣಿಸಿ ವಾರ್ಡ್ ಗಡಿಗಳನ್ನು ನಿರ್ಧರಿಸುವ ಜವಾಬ್ದಾರಿ ಈ ಸಮಿತಿಯದ್ದಾಗಿತ್ತು. 368 ವಾರ್ಡ್‌ಗಳನ್ನು ಈ ಸಮಿತಿ ಶಿಫಾರಸು ಮಾಡಿತ್ತು. ಸರ್ಕಾರವು ಅಂತಿಮ ಅಧಿಸೂಚನೆಯಲ್ಲಿ ಮತ್ತೊಂದು ವಾರ್ಡ್ ಅನ್ನು ಸೇರಿಸಿದೆ.
| ನಗರ ಪಾಲಿಕೆ | ವಾರ್ಡ್ಗಳು |
|---|---|
| ಬೆಂಗಳೂರು ಕೇಂದ್ರ | 63 |
| ಬೆಂಗಳೂರು ದಕ್ಷಿಣ | 72 |
| ಬೆಂಗಳೂರು ಉತ್ತರ | 72 |
| ಬೆಂಗಳೂರು ಪಶ್ಚಿಮ | 112 |
| ಬೆಂಗಳೂರು ಪೂರ್ವ | 50 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.