ADVERTISEMENT

ಜಿಬಿಎ: 5 ನಗರ ಪಾಲಿಕೆಗಷ್ಟೇ ಸೀಮಿತವಲ್ಲ

‘ಗ್ರೇಟರ್ ಬೆಂಗಳೂರು ಪ್ರದೇಶ’ ವ್ಯಾಪ್ತಿಗೆ ಬರುವ ಗ್ರಾ.ಪಂ.ಗಳ ಯೋಜನೆಗಳ ನಿರ್ವಹಣೆ ಜವಾಬ್ದಾರಿ

ಆರ್. ಮಂಜುನಾಥ್
Published 20 ಜುಲೈ 2025, 22:30 IST
Last Updated 20 ಜುಲೈ 2025, 22:30 IST
ಉದ್ದೇಶಿತ ಜಿಬಿಎ ನಕ್ಷೆ
ಉದ್ದೇಶಿತ ಜಿಬಿಎ ನಕ್ಷೆ   

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024’ರ (ಜಿಬಿಜಿಎ) ಪ್ರಕಾರ ರಚನೆಯಾಗಲಿರುವ ಮುಖ್ಯಮಂತ್ರಿ ನೇತೃತ್ವದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ವ್ಯಾಪ್ತಿ ನಗರ ಪಾಲಿಕೆಗಳಿಷ್ಟೇ ಸೀಮಿತವಾಗುವುದಿಲ್ಲ. ಸರ್ಕಾರ ‘ಗ್ರೇಟರ್ ಬೆಂಗಳೂರು ಪ್ರದೇಶ’ವನ್ನು ಎಷ್ಟು ವಿಸ್ತರಿಸುತ್ತದೆಯೋ ಅಲ್ಲಿಯವರೆಗೂ ಜಿಬಿಎ ಅಧಿಕಾರ ವ್ಯಾಪ್ತಿಯನ್ನು ಹೊಂದಲಿದೆ.

ಬಿಬಿಎಂಪಿ ವ್ಯಾಪ್ತಿಗಷ್ಟೇ ‘ಗ್ರೇಟರ್ ಬೆಂಗಳೂರು ಪ್ರದೇಶ’ವನ್ನು ಮೇ 15ರಂದು ಅಧಿಸೂಚಿಸಿರುವ ರಾಜ್ಯ ಸರ್ಕಾರ, ಸದ್ಯದಲ್ಲಿಯೇ ಇನ್ನೂ ಹಲವು ಪ್ರದೇಶಗಳನ್ನು ಸೇರಿಸಲಿದೆ. ಹೀಗಾಗಿ, ಮುಖ್ಯಮಂತ್ರಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡು ಶೀಘ್ರವೇ ರಚನೆಯಾಗುವ ‘ಜಿಬಿಎ’, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯನ್ನೂ ಮೀರಲಿದೆ. ಬೆಂಗಳೂರು ದಕ್ಷಿಣ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಪ್ರದೇಶಗಳೂ ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ಬರಲಿವೆ.

ಹೊಸ ನಗರ ಪಾಲಿಕೆಗಳೂ ಸೇರಿದಂತೆ ತನ್ನ ವ್ಯಾಪ್ತಿಯ ಎಲ್ಲ ಪ್ರದೇಶಗಳ ಅಭಿವೃದ್ಧಿಯ ನೇತೃತ್ವವನ್ನು ಜಿಬಿಎ ವಹಿಸಲಿದೆ. ಮೂಲಸೌಕರ್ಯಗಳು ಸೇರಿದಂತೆ ಬೃಹತ್ ಯೋಜನೆಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಯೂ ಜಿಬಿಎ ಅಧಿಕಾರ ವ್ಯಾಪ್ತಿಗೆ ಬರಲಿದೆ.

ADVERTISEMENT

ಬಿಬಿಎಂಪಿ ವ್ಯಾಪ್ತಿಯನ್ನೇ ‘ಗ್ರೇಟರ್ ಬೆಂಗಳೂರು ಪ್ರದೇಶ’ವನ್ನಾಗಿ ಗುರುತಿಸಿ, ಅದರಲ್ಲೇ ಐದು ಹೊಸ ನಗರ ಪಾಲಿಕೆಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ‘ಗ್ರೇಟರ್ ಬೆಂಗಳೂರಿಗೆ’ ಸುತ್ತಮುತ್ತಲಿನ ಪ್ರದೇಶಗಳೂ ಸೇರಿಕೊಂಡು ನಗರ ಪಾಲಿಕೆಗಳು ರಚನೆಯಾಗುತ್ತವೆ ಎಂಬ ಅನಿಸಿಕೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರಲ್ಲಿತ್ತು. ಹೀಗಾಗಿ, ಬಿಬಿಎಂಪಿ ವ್ಯಾಪ್ತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಗರಿಗೆದರಿಕೊಂಡಿತ್ತು. 

ಯಶವಂತಪುರ, ಬೆಂಗಳೂರು ದಕ್ಷಿಣ, ಮಹದೇವಪುರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳು ‘ಗ್ರೇಟರ್ ಬೆಂಗಳೂರು’ ಅಡಿ ರಚನೆಯಾಗಲಿರುವ ನಗರ ಪಾಲಿಕೆಗಳಿಗೆ ಸೇರುತ್ತವೆ ಎಂದು ಜನಪ್ರತಿನಿಧಿಗಳು ಆಗಾಗ್ಗೆ ಹೇಳುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕಾ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯ ಸ್ಥಳೀಯರೂ ಇದೇ ನಿರೀಕ್ಷೆಯಲ್ಲಿದ್ದರು. 

‘ನಮ್ಮ ಪ್ರದೇಶವೆಲ್ಲ ‘ಗ್ರೇಟರ್ ಬೆಂಗಳೂರು’ ಆಗುತ್ತದೆ. ಮೂಲಸೌಕರ್ಯದಲ್ಲಿ ಹಿಂದಿರುವ ನಮಗೆ ಹೆಚ್ಚು ಅನುಕೂಲವಾಗಲಿದೆ ಎಂದು ಭಾವಿಸಿದ್ದೆವು. ಆದರೆ, ಬಿಬಿಎಂಪಿ ವ್ಯಾಪ್ತಿಗಷ್ಟೇ ಐದು ನಗರ ಪಾಲಿಕೆಗಳಾಗಿರುವುದು ಹಲವರಲ್ಲಿ ನಿರಾಸೆ ತರಿಸಿದೆ’ ಎಂದು ಬಿಬಿಎಂಪಿ ಗಡಿಯಲ್ಲಿರುವ ಕಣ್ಣೂರು ನಿವಾಸಿ ನಾಗರಾಜು ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲೇ ಐದು ನಗರ ಪಾಲಿಕೆ ರಚನೆಯಾಗಿರುವುದರಿಂದ ಹೊಸ ಪ್ರದೇಶಗಳು ಜಿಬಿಎಗೆ ಸೇರಿಕೊಳ್ಳುವುದಿಲ್ಲ ಎಂದೇನೂ ಇಲ್ಲ. 712 ಚದರ ಕಿ.ಮೀ. ವ್ಯಾಪ್ತಿಗೆ ಮಾತ್ರ ನಗರ ಪಾಲಿಕೆಗಳು ರಚನೆಯಾಗಿವೆ. ಜಿಬಿಎ 1000 ಚದರ ಕಿ.ಮೀಗೂ ಹೆಚ್ಚು ಪ್ರದೇಶಕ್ಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ. ಈಗಿರುವ ಬಿಬಿಎಂಪಿ ವ್ಯಾಪ್ತಿಯ ಸುತ್ತಮುತ್ತಲಿರುವ ಪ್ರದೇಶಗಳು ‘ಗ್ರೇಟರ್ ಬೆಂಗಳೂರು’ ಆಗಲಿವೆ’ ಎಂದು ‘ಬ್ರ್ಯಾಂಡ್ ಬೆಂಗಳೂರು’ ಸಮಿತಿ ಸದಸ್ಯ ವಿ. ರವಿಚಂದರ್ ತಿಳಿಸಿದರು.

ರವಿಚಂದರ್
ವಿನೋದ್ ಜಾಕೋಬ್

* 1000 ಚದರ ಕಿ.ಮೀಗೆ ಹಿಗ್ಗಲಿರುವ ಜಿಬಿಎ ವ್ಯಾಪ್ತ

* ನಗರ ಜಿಲ್ಲೆಯಲ್ಲಿವೆ 86 ಗ್ರಾಮ ಪಂಚಾಯಿತಿಗಳು

* ಆರು ಉಪ ನಗರಗಳ ನಡುವಿನ ಪ್ರದೇಶ ‘ಗ್ರೇಟರ್ ಬೆಂಗಳೂರು’

ಅಧಿಕಾರ ವ್ಯಾಪ್ತಿ ದೊಡ್ಡದು: ರವಿಚಂದರ್ ‘ಜಿಬಿಜಿಎ ಕಾಯ್ದೆಯಂತೆ ರಚನೆಯಾಗುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ನಿರ್ವಹಿಸುವ ನಿಗಾ ವಹಿಸುವ ಅಧಿಕಾರವನ್ನು ಹೊಂದಿದೆ. ರಾಜ್ಯ ಸರ್ಕಾರ ಒದಗಿಸುವ ಹಣಕಾಸಿನಲ್ಲಿ ಜಿಬಿಎ ಬೃಹತ್ ಯೋಜನೆಗಳನ್ನು ನಿರ್ವಹಿಸಬಹುದು’ ಎಂದು ‘ಜಿಬಿಎ ಕಾಯ್ದೆ’ ರಚನೆಯ ‘ಬ್ರ್ಯಾಂಡ್ ಬೆಂಗಳೂರು’ ಸಮಿತಿ ಸದಸ್ಯ ವಿ. ರವಿಚಂದರ್ ತಿಳಿಸಿದರು.

‘5 ಶಾಸಕರಿಗೆ ಎರಡು ಪಾಲಿಕೆಯಲ್ಲಿ ಹಕ್ಕು’

ರಾಜರಾಜೇಶ್ವರಿನಗರ ಯಶವಂತಪುರ ಮಹದೇವಪುರ ಪದ್ಮನಾಭನಗರ ದಾಸರಹಳ್ಳಿ ವಿಧಾನಸಭೆ ಕ್ಷೇತ್ರಗಳ ವಾರ್ಡ್‌ಗಳು ಎರಡು ನಗರ ಪಾಲಿಕೆಗಳ ವ್ಯಾಪ್ತಿಗೆ ಬರುವುದರಿಂದ ಐದು ಶಾಸಕರಿಗೆ ಎರಡು ನಗರ ಪಾಲಿಕೆಗಳಲ್ಲಿ ‘ಹಕ್ಕು’ ಸಿಗಲಿದೆ. ಕರಡು ಅಧಿಸೂಚನೆಯಂತೆಯೇ ಎಲ್ಲವೂ ಕಾರ್ಯಾನುಷ್ಠಾನವಾದರೆ ಮೇಯರ್- ಉಪ ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕು ಸೇರಿದಂತೆ ಶಾಸಕರಿಗೆ ಅನುದಾನ ಹಾಗೂ ಪಾಲಿಕೆಯ ಕಾರ್ಯನಿರ್ವಹಣೆ ಬಗ್ಗೆ ಕೌನ್ಸಿಲ್‌ನಲ್ಲಿ ಮಾತನಾಡುವ ಅಧಿಕಾರವೂ ಲಭ್ಯವಾಗಲಿದೆ.

‘ಮಾಸ್ಟರ್ ಪ್ಲಾನ್’ ಇಲ್ಲದೆ ಏನು ಪ್ರಯೋಜನ: ವಿನೋದ್ ‘ಮಾಸ್ಟರ್ ಪ್ಲಾನ್ ಇಲ್ಲದೆ ಸರ್ಕಾರವೇ ನಿಯಂತ್ರಿಸುವ ಮತ್ತಷ್ಟು ಸ್ಥಳೀಯ ಸಂಸ್ಥೆಗಳನ್ನು ರಚಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಏಷ್ಯಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಒಂದಾಗಿದ್ದರೂ 2015ರಿಂದ ನಿರ್ಲಿಪ್ತವಾಗಿರುವ ‘ಮಾಸ್ಟರ್ ಪ್ಲಾನ್’ನಿಂದ ಪ್ರಗತಿ ಕಾಣಲು ಸಾಧ್ಯವಾಗುತ್ತಿಲ್ಲ. ನೀರು ವಿದ್ಯುತ್ ಪರಿಸರ ಸಾರ್ವಜನಿಕ ಸಾರಿಗೆ ನಾಗರಿಕ ಮೂಲಸೌಕರ್ಯ ಒದಗಿಸುವ ಜೊತೆಗೆ ಬೆಂಗಳೂರಿನ ಅನನ್ಯ ವಾತಾವರಣವನ್ನು ರಕ್ಷಿಸುವ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ‘ಮಾಸ್ಟರ್ ಪ್ಲಾನ್’ ತುರ್ತು ಅಗತ್ಯವಿದೆ. ಬೆಂಗಳೂರು ‘ಐಟಿ ರಾಜಧಾನಿ’ ಮಾತ್ರವಲ್ಲ ವಿಜ್ಞಾನ ಮತ್ತು ಉತ್ಪಾದನೆ ವಲಯದಲ್ಲೂ ಭಾರತದ ರಾಜಧಾನಿಯಾಗಿದೆ. ಜಿಬಿಎನಂತಹ ಹೊಸ ಪ್ರಾಧಿಕಾರಗಳು ರಚನೆಯಾಗುವ ಮುನ್ನ ನಮ್ಮ ನಗರಕ್ಕೆ ದೂರದೃಷ್ಟಿ ಹೊಂದಿರುವ ‘ನೀಲನಕ್ಷೆ’ಯ ಅಗತ್ಯವಿದೆ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಜಾಕಬ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.