ADVERTISEMENT

ಬೆಂಗಳೂರು: ಬ್ಯಾಂಕ್‌ನಲ್ಲೇ ಸಿಲುಕಿದ ₹50 ಕೋಟಿ ಇಎಂಡಿ

ಬಿಬಿಎಂಪಿ ಅವಧಿಯ ಟೆಂಡರ್‌ಗೆ ಪಾವತಿಸಿದ್ದ ₹ 50 ಕೋಟಿ ಮುಂಗಡ ಹಣ

ಆರ್. ಮಂಜುನಾಥ್
Published 1 ನವೆಂಬರ್ 2025, 23:30 IST
Last Updated 1 ನವೆಂಬರ್ 2025, 23:30 IST
<div class="paragraphs"><p>ಬೆಂಗಳೂರು ನಗರದ ಎನ್‌.ಆರ್‌. ಚೌಕದಲ್ಲಿರುವ ಪ್ರಧಾನ ಕಚೇರಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಫಲಕವನ್ನು ತೆರವುಗೊಳಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಫಲಕವನ್ನು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ನೇತೃತ್ವದಲ್ಲಿ&nbsp;ಅಳವಡಿಸಲಾಯಿತು</p></div>

ಬೆಂಗಳೂರು ನಗರದ ಎನ್‌.ಆರ್‌. ಚೌಕದಲ್ಲಿರುವ ಪ್ರಧಾನ ಕಚೇರಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಫಲಕವನ್ನು ತೆರವುಗೊಳಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಫಲಕವನ್ನು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ನೇತೃತ್ವದಲ್ಲಿ ಅಳವಡಿಸಲಾಯಿತು

   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅವಧಿಯಲ್ಲಿ ಕರೆಯಲಾಗಿದ್ದ ನೂರಾರು ಟೆಂಡರ್‌ಗಳು ಅಂತಿಮವಾಗದೆ ಇರುವುದರಿಂದ ನಾಲ್ಕು ತಿಂಗಳಿಂದ ಗುತ್ತಿಗೆದಾರರು ಪಾವತಿಸಿರುವ ₹50 ಕೋಟಿಗೂ ಹೆಚ್ಚು ಮುಂಗಡ ಹಣ (ಇಎಂಡಿ) ಬ್ಯಾಂಕ್‌ಗಳಲ್ಲೇ ಉಳಿದಿದೆ.

ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳು ಸೆಪ್ಟೆಂಬರ್‌ 2ರಂದು ರಚನೆಯಾದವು. ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂಬ ಅರಿವಿದ್ದರೂ ಅಧಿಕಾರಿಗಳು ಸೆ.2ರವರೆಗೂ ವಿವಿಧ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಆಹ್ವಾನಿಸಿದ್ದರು.

ADVERTISEMENT

ಜಿಬಿಎ ಅಸ್ತಿತ್ವಕ್ಕೆ ಬಂದ ನಂತರ ಎಲ್ಲ ಟೆಂಡರ್‌ಗಳ ಪ್ರಕ್ರಿಯೆ ಸ್ಥಗಿತಗೊಂಡಿವೆ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಆಹ್ವಾನಿಸಿದ್ದ ಸಾವಿರಾರು ಟೆಂಡರ್‌ಗಳ ಪ್ರಕ್ರಿಯೆ ಪೂರ್ಣ ಮುಗಿದಿಲ್ಲ. ಹೀಗಾಗಿ, ಒಂದು ಟೆಂಡರ್‌ ಮೊತ್ತದ ಶೇ 1ರಷ್ಟನ್ನು ಇಎಂಡಿಯಾಗಿ ಗುತ್ತಿಗೆದಾರರು ಪಾವತಿಸಿದ್ದ ₹50 ಕೋಟಿಗೂ ಹೆಚ್ಚು ಹಣ ಬ್ಯಾಂಕ್‌ಗಳಲ್ಲಿಯೇ ಇದೆ. 

ಗುತ್ತಿಗೆದಾರರು ಪಾವತಿಸಿರುವ ಇಎಂಡಿ ಮೊತ್ತಕ್ಕೆ ಬಿಬಿಎಂಪಿಯಾಗಲಿ, ಬ್ಯಾಂಕ್‌ ಆಗಲಿ ಬಡ್ಡಿ ನೀಡುವುದಿಲ್ಲ. ಇಎಂಡಿ ಮೊತ್ತವನ್ನು ಇ–ಸಂಗ್ರಹಣಾ (ಇ–ಪ್ರೊಕ್ಯೂರ್‌ಮೆಂಟ್) ತಂತ್ರಾಂಶದ ಮೂಲಕ ಬ್ಯಾಂಕ್‌ಗಳಿಗೆ ಪಾವತಿಸಲಾಗಿದೆ. ಈ ಮೊತ್ತ ಬ್ಯಾಂಕ್‌ಗಳಲ್ಲೇ ಸಿಲುಕಿದೆ.

ಬಿಬಿಎಂಪಿ ಇದ್ದಾಗ ಜುಲೈನಿಂದ ಆಹ್ವಾನಿಸಲಾಗಿದ್ದ ಟೆಂಡರ್‌ಗಳ ಪ್ರಕ್ರಿಯೆ ಇನ್ನೂ ‘ಫ್ರೀಜ್‌’ನಲ್ಲೇ ಇದೆ. ನೂರಾರು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದರೂ ಅದು ಯಾವ ನಗರ ಪಾಲಿಕೆ ವ್ಯಾಪ್ತಿಗೆ ಸೇರಬೇಕೋ ಅಲ್ಲಿಗೆ ಅವುಗಳನ್ನು ಇನ್ನೂ ವರ್ಗಾಯಿಸಿಲ್ಲ. ಈ ಕಾಮಗಾರಿಗಳಿಗೆ ಬಿಡ್‌ ಸಲ್ಲಿಸಿದ್ದ ಗುತ್ತಿಗೆದಾರರ ಇಎಂಪಿಯನ್ನೂ ಅವರಿಗೆ ವಾಪಸ್‌ ನೀಡಿಲ್ಲ.

ಇನ್ನು ಕೊನೆಯ ಎರಡು ತಿಂಗಳಲ್ಲಿ ತರಾತುರಿಯಲ್ಲಿ ನಾನಾ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು. ನೂರಾರು ಗುತ್ತಿಗೆದಾರರು ಇಎಂಡಿ ಪಾವತಿಸಿ ಬಿಡ್‌ ಸಲ್ಲಿಸಿದ್ದಾರೆ. ಇಂತಹ ಟೆಂಡರ್‌ಗಳ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಇಎಂಡಿ ಮೊತ್ತ ಬ್ಯಾಂಕ್‌ಗಳಲ್ಲೇ ಇದೆ.

ಇಎಂಡಿ ವಾಪಸ್‌ ನೀಡಲು ಮನವಿ

‘ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಹಲವು ಟೆಂಡರ್‌ಗಳನ್ನು ಆಹ್ವಾನಿಸಿದ್ದು ಟೆಂಡರ್‌ ಪ್ರಕ್ರಿಯೆಯನ್ನು ಗ್ರೇಟರ್‌ ಬೆಂಗಳೂರು ಅಥವಾ ನಗರ ಪಾಲಿಕೆಗಳು ಇನ್ನೂ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರು ₹50 ಕೋಟಿಗೂ ಹೆಚ್ಚು ಹಣವನ್ನು ಇಎಂಡಿಯಾಗಿ ಪಾವತಿಸಿದ್ದು ಅದು ಬ್ಯಾಂಕ್‌ನಲ್ಲೇ ಉಳಿದಿದೆ. ಇಎಂಡಿಗೆ ಯಾವುದೇ ಬಡ್ಡಿ ನೀಡದಿರುವುದರಿಂದ ಬ್ಯಾಂಕ್‌ಗೆ ಲಾಭವಾಗಿದೆ. ಜಿಬಿಎ– ನಗರ ಪಾಲಿಕೆಗಳು ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಗುತ್ತಿಗೆದಾರರು ತಮ್ಮ ಹಣವನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಟೆಂಡರ್‌ ಪ್ರಕ್ರಿಯೆಗಳನ್ನು ಮುಗಿಸಿ ಇಎಂಡಿ ಹಿಂದಿರುಗಿಬೇಕು. ಇಲ್ಲವೇ ಎಲ್ಲ ಟೆಂಡರ್‌ಗಳನ್ನು ರದ್ದು ಮಾಡಿ ಇಎಂಡಿ ವಾಪಸ್‌ ನೀಡಬೇಕು’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ತಿಳಿಸಿದರು. ‘ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಅಕ್ಟೋಬರ್ 4ರಂದು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಇ–ಆಡಳಿತದವರು ಮೂರು ತಿಂಗಳ ನಂತರದ ಇಎಂಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿರುವುದರಿಂದ ಗುತ್ತಿಗೆದಾರರು ಆತಂಕಗೊಂಡಿದ್ದು ಕೂಡಲೇ ಇಎಂಡಿ ವಾಪಸ್‌ ಮಾಡಬೇಕು’ ಎಂದು ಆಗ್ರಹಿಸಿದರು.

ಇಎಂಡಿ ಮುಟ್ಟುಗೋಲಿಗೆ ಆದೇಶ

ಇ–ಸಂಗ್ರಹಣಾ ತಂತ್ರಾಂಶ 1.0 ಆವೃತ್ತಿಯಲ್ಲಿ ಟೆಂಡರ್/ ಹರಾಜುಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇಎಂಡಿ ಮೊತ್ತವನ್ನು ಮೂರು ತಿಂಗಳಲ್ಲಿ ಮರುಪಾವತಿಸಬೇಕು. ಇಲ್ಲದಿದ್ದರೆ ಆ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ಸಂಚಿತ ನಿಧಿಗೆ ಜಮೆ ಮಾಡಬೇಕು ಎಂದು ಇ–ಆಡಳಿತ ಅ.24ರಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ (ಕೆಪಿಪಿಪಿ) 1.0 ಆವೃತ್ತಿಯನ್ನು ಅ.14ರಿಂದ ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ಅದರಲ್ಲಿ ಬಾಕಿ ಇರುವ ಟೆಂಡರ್‌/ ಹರಾಜುಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಎಲ್ಲ ಇಎಂಡಿಯನ್ನು ಮುಟ್ಟುಗೋಲು ಹಾಕಿಕೊಂಡು ಆಯಾ ಇಲಾಖೆಯವರು ಸರ್ಕಾರದ ಸಂಚಿತ ನಿಧಿಗೆ ಜಮೆ ಮಾಡಬೇಕು ಎಂದು ಇ–ಆಡಳಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.