ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಆಯುಕ್ತರು, ಸ್ಥಾಯಿ ಸಮಿತಿ, ಪಾಲಿಕೆ ಸಭೆಗೆ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರು, ಟೆಂಡರ್ ಅನುಮೋದನೆಯ ಪ್ರಮಾಣ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ನಗರ ಪಾಲಿಕೆಯ ಆಯುಕ್ತರು ₹3 ಕೋಟಿವರೆಗಿನ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ, ಕಾಮಗಾರಿಗಳ ಟೆಂಡರ್ ಅನುಮೋದನೆ ನೀಡಬಹುದು. ಸ್ಥಾಯಿ ಸಮಿತಿ ಅಥವಾ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ₹3 ಕೋಟಿಯಿಂದ ₹5 ಕೋಟಿ, ಪಾಲಿಕೆ ಸಭೆಗೆ ₹5 ಕೋಟಿಯಿಂದ ₹10 ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡಲು ಅಧಿಕಾರ ನೀಡಲಾಗಿದೆ.
ಯಾವುದೇ ಕಾಮಗಾರಿಯ ಮೊತ್ತ ₹10 ಕೋಟಿ ಮೀರಿದರೆ ಅದರ ಅಂದಾಜುಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ, ಟೆಂಡರ್ ಅನುಮೋದನೆಯನ್ನು ಸರ್ಕಾರದಿಂದಲೇ ಪಡೆಯಬೇಕು ಎಂದು ಆದೇಶಿಸಲಾಗಿದೆ.
ಯೋಜನೆ ಅನುಷ್ಠಾನ ಘಟಕ: ಬಿಬಿಎಂಪಿಯಲ್ಲಿದ್ದ ಬೃಹತ್ ನೀರುಗಾಲುವೆ ವಿಭಾಗದ ಯೋಜನೆಗಳನ್ನು ಜಿಬಿಎಯಲ್ಲಿರುವ ಯೋಜನಾ ಅನುಷ್ಠಾನ ಘಟಕದ ಮುಖ್ಯ ಎಂಜಿನಿಯರ್ ಅವರಿಗೆ ವರ್ಗಾಯಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
₹238.72 ಕೋಟಿ ಮೊತ್ತದ ನಗರ ಪ್ರವಾಹ ಅಪಾಯ ನಿರ್ವಹಣೆ (ಎನ್‌ಡಿಎಂಎಫ್) ಕಾರ್ಯಕ್ರಮ ಯೋಜನೆ, ವಿಶ್ವ ಬ್ಯಾಂಕ್ ನೆರವಿನ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮ ₹2,000 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆ ವರ್ಗಾಯಿಸಲಾಗಿದೆ.
ಯೋಜನೆ ಅನುಷ್ಠಾನ ಘಟಕಕ್ಕೆ ಎಸ್.ವಿ. ರಾಜೇಶ್ ಅವರನ್ನು ಮುಖ್ಯ ಎಂಜಿನಿಯರ್ ಆಗಿ ಸ್ಥಳ ನಿಯುಕ್ತಿಗೊಳಿಸಿದ್ದು, ಎರಡೂ ಯೋಜನೆಗಳನ್ನು ಅವರಿಗೆ ವಹಿಸಲಾಗಿದೆ. ಜಿಬಿಎಯಲ್ಲಿರುವ 10 ಕಾರ್ಯಪಾಲಕ ಎಂಜಿನಿಯರ್‌ಗಳಲ್ಲಿ ಅಗತ್ಯವಿರುವಷ್ಟು ಇಇಗಳನ್ನು ಈ ವಿಭಾಗಕ್ಕೆ ನೇಮಿಸಿಕೊಂಡು ಕಾಮಗಾರಿ ಕಾರ್ಯಾದೇಶ ನೀಡಿ ಅನುಷ್ಠಾನಗೊಳಿಸಬೇಕು ಎಂದು ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.