ADVERTISEMENT

ಜಿಬಿಎ ರಚನೆ: ನಗರ ಆಡಳಿತದ ಮೇಲೆ ಹಿಡಿತ

ರಚನೆಯಾಗಲಿರುವ ಐದೂ ನಗರ ಪಾಲಿಕೆಗಳ ಮೇಲೆ ನಿಯಂತ್ರಣ; ಬಿಬಿಎಂಪಿ ಮುಖ್ಯ ಆಯುಕ್ತರಿಗೇ ಜಿಬಿಎ ಆಯುಕ್ತರ ಸ್ಥಾನ

ಆರ್. ಮಂಜುನಾಥ್
Published 26 ಆಗಸ್ಟ್ 2025, 19:21 IST
Last Updated 26 ಆಗಸ್ಟ್ 2025, 19:21 IST
<div class="paragraphs"><p>ಗ್ರೇಟರ್ ಬೆಂಗಳೂರು</p></div>

ಗ್ರೇಟರ್ ಬೆಂಗಳೂರು

   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಪ್ರದೇಶ’ (ಬಿಬಿಎಂಪಿ) ವ್ಯಾಪ್ತಿಯಲ್ಲಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ವನ್ನು (ಜಿಬಿಎ) ಸರ್ಕಾರ ರಚಿಸಿದ್ದು, ನಗರದ ಸಂಪೂರ್ಣ ಆಡಳಿತದ ಮೇಲೆ ಹಿಡಿತ ಸಾಧಿಸಲಿದೆ.

ಸೆಪ್ಟೆಂಬರ್‌ 2ರಂದು ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆಯಾದ ನಂತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವ ಕಳೆದುಕೊಳ್ಳಲಿದ್ದು, ನಗರದ ಆಡಳಿತ ವ್ಯವಸ್ಥೆಯನ್ನು ಜಿಬಿಎ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.

ADVERTISEMENT

ಬಿಬಿಎಂಪಿಯಲ್ಲಿ ಈಗಿರುವ ವಿಶೇಷ ಆಯುಕ್ತರೂ ಸೇರಿದಂತೆ ಜಂಟಿ ಆಯುಕ್ತ, ಉಪ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳನ್ನು ಜಿಬಿಎ ಅಥವಾ ಐದು ನಗರ ಪಾಲಿಕೆಗಳಿಗೆ ವರ್ಗಾಯಿಸಲು ಸರ್ವ ರೀತಿಯಲ್ಲೂ ಸಿದ್ದತೆಯಾಗಿದೆ. ನಗರ ಪಾಲಿಕೆಯ ಮೂಲ ಕಾಮಗಾರಿಗಳನ್ನು ಹೊರತುಪಡಿಸಿದರೆ, ಅಂತರ ನಗರ ಪಾಲಿಕೆಗಳ ಯೋಜನೆಗಳನ್ನು ಜಿಬಿಎ ಸಿದ್ಧಪಡಿಸಿ, ನಿರ್ವಹಿಸಲಿದೆ. ಅಲ್ಲಿನ ತೀರ್ಮಾನಗಳಂತೆಯೇ ಕಾಮಗಾರಿಗಳು ನಡೆಯಲಿವೆ.

ಬೃಹತ್‌ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ವಿಶೇಷ ಉದ್ದೇಶದ ಸಂಸ್ಥೆ (ಎಸ್‌ಪಿವಿ)– ‘ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆ’ (ಬಿ–ಸ್ಮೈಲ್‌) ಕಾರ್ಯನಿರ್ವಹಿಸುತ್ತಿದ್ದು, ಇದೂ ಜಿಬಿಎ ಅಡಿಯಲ್ಲಿ ಇರಲಿದೆ. ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ, ನಗರ ಪೊಲೀಸ್‌, ನಗರ ಜಿಲ್ಲಾಧಿಕಾರಿ, ಅಗ್ನಿಶಾಮಕ ದಳಗಳೂ ಜಿಬಿಎ ವ್ಯಾಪ್ತಿಗೆ ಬರುವುದರಿಂದ ಎಲ್ಲ ಕಾಮಗಾರಿಗಳೂ ಇಲ್ಲೇ ನಿರ್ಧಾರವಾಗಲಿವೆ.

ಬಿಬಿಎಂಪಿ ಮುಖ್ಯ ಆಯುಕ್ತರಿಗೇ ಬಿಜಿಎ ಮುಖ್ಯ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ಮಂಗಳವಾರ ವಹಿಸಲಾಗಿದೆ. ಜಿಬಿಎಯ ಮುಖ್ಯ ನಗರ ಯೋಜಕ ಹಾಗೂ ಮುಖ್ಯ ಎಂಜಿನಿಯರ್‌ ಅವರ ಹುದ್ದೆಯನ್ನು ಅಧಿಸೂಚಿಸಿ, ನೇಮಿಸಬೇಕಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಾರ್ಯವ್ಯಾಪ್ತಿ

* ಜಿಬಿಎ ಶಾಶ್ವತ ಉತ್ತರಾಧಿಕಾರ, ಸಾಮಾನ್ಯ ಮೊಹರನ್ನು ಹೊಂದಿ, ತನ್ನ ಹೆಸರಿನಲ್ಲಿ ಸ್ವತ್ತುಗಳನ್ನು ಅರ್ಜಿಸುವ, ಧಾರಣ ಮಾಡುವ, ವಿಲೇ ಮಾಡುವ ಕರಾರು ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ.

* ಜಿಬಿಎಗೆ ನೇಮಕವಾದ ಸದಸ್ಯರಲ್ಲದೆ, ರೈಲು ಮೂಲಸೌಕರ್ಯ ಅಭಿವೃದ್ಧಿ ಉದ್ಯಮ ನಿಯಮಿತ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ಸರ್ಕಾರ ಗೊತ್ತುಪಡಿಸಬಹುದಾದ ಯಾವುದೇ ಏಜೆನ್ಸಿ ಅಥವಾ ಇಲಾಖೆಯ ಅಧಿಕಾರಿಗಳು ಸಭೆಗೆ ವಿಶೇಷ ಆಹ್ವಾನಿತರಾಗಬಹುದು. ಅವರಿಗೆ ಮತದಾನದ ಹಕ್ಕು ಇರುವುದಿಲ್ಲ.

* ಮೂಲಸೌಕರ್ಯ, ನಗರ ಯೋಜನೆ, ಆಡಳಿತ, ಕಾನೂನು, ಹಣಕಾಸು, ಜಾಗೃತ ದಳ ಹಾಗೂ ಇತರೆ ಪ್ರಕಾರ್ಯಗಳಿಗೆ ಅನುಕೂಲವಾಗಲು ಅಧಿಕಾರಿಗಳನ್ನು ನೇಮಿಸಿಕೊಳ್ಳಬಹುದು.

* ಜಿಬಿಎ ಪ್ರದೇಶದಲ್ಲಿರುವ ನಗರ ಪಾಲಿಕೆಗಳಿಗೆ ಸಿಬ್ಬಂದಿ ನಿಯೋಜನೆ, ಜ್ಯೇಷ್ಠತೆ, ಮುಂಬಡ್ತಿ, ಮುಖ್ಯ ಎಂಜಿನಿಯರ್‌ವರೆಗಿನ ವೃಂದ ಮಟ್ಟದ ನಿಯೋಜನೆ, ಸೇವೆಯಿಂದ ವಜಾ, ಕಡ್ಡಾಯ ನಿವೃತ್ತಿ, ಕಡಿಮೆ ವೇತನ ಶ್ರೇಣಿ ಅಥವಾ ಹುದ್ದೆಗೆ ಇಳಿಸುವ ಕಾರ್ಯವನ್ನು ಜಿಬಿಎ ನಿಭಾಯಿಸಲಿದೆ

* ಜಿಬಿಎ ಅಧ್ಯಕ್ಷರು ಕನಿಷ್ಠ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಾಧಿಕಾರದ ಸಭೆ ಕರೆಯಬೇಕು. ಅಧ್ಯಕ್ಷರ ಉಪಸ್ಥಿತಿಯಲ್ಲಿ ಉಪಾಧ್ಯಕ್ಷರು ಸಭೆ ಅಧ್ಯಕ್ಷತೆ ವಹಿಸಬೇಕು

* ಜಿಬಿಎ ಸಭೆಯ ಮುಂದೆ ಬರುವ ವಿಷಯಗಳನ್ನು ಹಾಜರಿರುವ ಸದಸ್ಯರು ಬಹುಮತದ ಮೂಲಕ ತೀರ್ಮಾನಿಸಲಿದ್ದಾರೆ. ಸದಸ್ಯ ಕಾರ್ಯದರ್ಶಿ ಪ್ರತಿ ಸಭೆ ಮುಗಿದ ಮೂರು ದಿನಗಳೊಳಗೆ ಎಲ್ಲ ತೀರ್ಮಾನಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಪ್ರಕಟಿಸಬೇಕು

* ಜಿಬಿಎ ಅಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಅಥವಾ ಮುಖ್ಯಮಂತ್ರಿಯವರು ಸೂಚಿಸುವ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಬೇಕು. ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಜಿಬಿಎ ಸಿದ್ಧಪಡಿಸಿದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು

* ಗ್ರೇಟರ್‌ ಬೆಂಗಳೂರು ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಹಾ ಯೋಜನೆ (ಮಾಸ್ಟರ್‌ ಪ್ಲಾನ್‌) ಹೊಂದಲು ಎಲ್ಲ ಪ್ರಾಧಿಕಾರಗಳ ವ್ಯಾಪ್ತಿಯನ್ನು ಒಳಗೊಂಡ ಕ್ರಿಯಾಯೋಜನೆಯನ್ನು ಜಿಬಿಎ ರೂಪಿಸಬೇಕು.

* ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಕಾಮಗಾರಿಗಳಿಗೆ ಅನುದಾನಗಳನ್ನು ಜಿಬಿಎ ಪಡೆದುಕೊಂಡು, ಅದರಿಂದಲೇ ಸಾಂಸ್ಥಿಕ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಭರಿಸಿಕೊಳ್ಳಬಹುದು. ವಾರ್ಷಿಕ ಆಯವ್ಯಯ ಅಂದಾಜನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಅಗತ್ಯ ಯೋಜನೆಗಳಿಗೆ ಸಾಲ ಪಡೆಯಬಹುದು

* ನಗರ ಪಾಲಿಕೆಗಳ ನಿಧಿಗಳಿಂದ ಕೈಗೊಳ್ಳಲಾಗುವ ಪ್ರಮುಖ ಕಾಮಗಾರಿಗಳನ್ನೂ ಜಿಬಿಎಗೆ ವಹಿಸಿಕೊಡಬೇಕು. ಒಂದಕ್ಕಿಂತ ಹೆಚ್ಚು ಪಾಲಿಕೆಗಳ ವ್ಯಾಪ್ತಿಯ ಯೋಜನೆಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವೇ ನಿರ್ವಹಿಸಲಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳನ್ನು ರೂಪಿಸಿ, ಆರ್ಥಿಕ ಅಭಿವೃದ್ಧಿ ಏಜೆನ್ಸಿಗೆ ಅದನ್ನು ವಹಿಸಬಹುದು

* ಹವಾಮಾನ ಕ್ರಿಯಾ ಕೋಶವನ್ನು ರಚಿಸಿ, ಒಂದು ವರ್ಷದೊಳಗೆ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸಲು, ಕ್ರಿಯಾ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಗಳ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಬೇಕು. ಇದಕ್ಕಾಗಿ ವಲಯ ತಜ್ಞರ ಸಮಿತಿಗಳನ್ನು ರಚಿಸಬಹುದು

ಸೀತಾರಾಮ್‌ಗೆ ಸ್ಥಾನ ಇಲ್ಲ

ವಿಧಾನ ಪರಿಷತ್‌ ಸದಸ್ಯರಾಗಿರುವ ಬೆಂಗಳೂರಿನ ನಿವಾಸಿಗಳಾದ ಎಂ.ಆರ್‌. ಸೀತಾರಾಮ್‌ ಸೇರಿದಂತೆ ಒಂಬತ್ತು ಮಂದಿಯನ್ನು ಜಿಬಿಎನಲ್ಲಿ ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಿಲ್ಲ.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಪ್ರಕಾರ, ಅಧ್ಯಾಯನ 3ರ ಉಪ ಪ್ರಕರಣ 5ರಲ್ಲಿ ಜಿಬಿಎಗೆ ಯಾರೆಲ್ಲ ಸದಸ್ಯರಾಗಬೇಕು ಎಂದು ವಿವರಿಸಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ ವಾಸಿಸುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ನ ಎಲ್ಲ ಸದಸ್ಯರು ಜಿಬಿಎ ಸದಸ್ಯರಾಗಿರಬೇಕು ಎಂದು ಹೇಳಲಾಗಿದೆ.

ವಿಧಾನ ಪರಿಷತ್‌ ಸದಸ್ಯರಾಗಿರುವ ಎಂ.ಆರ್‌. ಸೀತಾರಾಮ್‌, ಎಸ್‌.ಎಲ್‌. ಭೋಜೇಗೌಡ, ಬಿ. ಚಂದ್ರಶೇಖರ ಬಿ. ಪಾಟೀಲ, ಚಿದಾನಂದ್‌ ಎಂ. ಗೌಡ, ಮಧು ಜಿ. ಮಾದೇಗೌಡ, ರಾಮೋಜಿಗೌಡ, ಎಚ್.ಪಿ. ಸುಧಾಮದಾಸ್‌, ಡಿ.ಟಿ. ಶ್ರೀನಿವಾಸ್‌, ಉಮಾಶ್ರೀ ಅವರು ನಗರದಲ್ಲಿ ವಾಸವಿರುವುದು ವಿಧಾನ ಪರಿಷತ್‌ನ ಅಧಿಕೃತ ದಾಖಲೆಗಳಲ್ಲಿದೆ. ಆದರೆ, ಇವರನ್ನು ಜಿಬಿಎ ಸದಸ್ಯರನ್ನಾಗಿ ನೇಮಿಸಿಲ್ಲ. ವಿಧಾನ ಪ‍ರಿಷತ್‌ನ 20 ಸದಸ್ಯರು ಬೆಂಗಳೂರಿನಲ್ಲಿ ವಾಸ ಸ್ಥಳವನ್ನು ದಾಖಲಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಒಂಬತ್ತು ಮಂದಿಯನ್ನು ಮಾತ್ರ ಜಿಬಿಎ ಸದಸ್ಯರನ್ನಾಗಿ ನೇಮಿಸಲಾಗಿದೆ.

ಯಲಹಂಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಎರಡು ವಾರ್ಡ್‌ಗಳು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಸೇರುತ್ತವೆ. ಆದರೂ ಅದರ ಸಂಸದ ಸುಧಾಕರ್ ಅವರನ್ನು ಜಿಬಿಎ ಸದಸ್ಯರನ್ನಾಗಿ ನೇಮಿಸಿಲ್ಲ.

ಜಿಬಿಎ ಸದಸ್ಯರು...

ಸಿದ್ದರಾಮಯ್ಯ, ಮುಖ್ಯಮಂತ್ರಿ– ಅಧ್ಯಕ್ಷ

ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ; ಉಪಾಧ್ಯಕ್ಷ

ಮುಖ್ಯ ಆಯುಕ್ತ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ– ಸದಸ್ಯ ಕಾರ್ಯದರ್ಶಿ

ಪದನಿಮಿತ್ತ ಸದಸ್ಯರು (ಜನಪ್ರತಿನಿಧಿಗಳು): ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವೆ; ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ; ರಾಜ್ಯದ ಆರು ಸಚಿವರು; ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರು; ನಗರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರದ ಶಾಸಕರು; 11 ಮಂದಿ ವಿಧಾನ ಪರಿಷತ್‌ ಸದಸ್ಯರು; ಐದು ನಗರ ಪಾಲಿಕೆಗಳ ಮೇಯರ್‌.

ಪದನಿಮಿತ್ತ ಸದಸ್ಯರು (ಅಧಿಕಾರಿಗಳು): ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ; ಆಯುಕ್ತ, ಬಿಡಿಎ; ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌; ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ಮೆಟ್ರೊ ರೈಲು ನಿಗಮ; ಮಹಾನಗರ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ; ಸಿಇಒ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ; ಅಧ್ಯಕ್ಷ, ಬೆಂಗಳೂರು ಜಲಮಂಡಳಿ; ಆಯುಕ್ತ, ನಗರ ಭೂ ಸಾರಿಗೆ ನಿರ್ದೇಶನಾಲಯ; ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ; ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ; ಐದು ನಗರ ಪಾಲಿಕೆಗಳ ಆಯುಕ್ತರು; ನಗರ ಜಿಲ್ಲಾಧಿಕಾರಿ; ನಿರ್ದೇಶಕ, ಅಗ್ನಿಶಾಮಕ ದಳ; ಮುಖ್ಯ ನಗರ ಯೋಜಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮುಖ್ಯ ಎಂಜಿನಿಯರ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ.

ಡಿ.ಕೆ. ಶಿವಕುಮಾರ್ ಹೇಳಿದ್ದು...

l  ಸೆಪ್ಟೆಂಬರ್‌ 2ಕ್ಕೆ ಐದು ನಗರ ಪಾಲಿಕೆಗಳ ಗಡಿಯ ಅಂತಿಮ ಅಧಿಸೂಚನೆ

l ಸೆಪ್ಟೆಂಬರ್‌ 3ರಿಂದ ವಾರ್ಡ್‌ ಮರುವಿಂಗಣೆ ಕಾರ್ಯ ಆರಂಭ

l ನವೆಂಬರ್‌ 1ರಂದು ವಾರ್ಡ್‌ ಗಡಿ ಅಂತಿಮ ಅಧಿಸೂಚನೆ

l ನವೆಂಬರ್‌ 2ರ ನಂತರ ವಾರ್ಡ್‌ ಮೀಸಲಾತಿ ಕರಡು ಅಧಿಸೂಚನೆ

l ಡಿಸೆಂಬರ್‌ 2ರ ನಂತರ ವಾರ್ಡ್‌ ಮೀಸಲಾತಿ ಅಂತಿಮ ಅಧಿಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.