ಬೆಂಗಳೂರು: ‘ನಗರ ಪಾಲಿಕೆಗಳ ಆಯುಕ್ತರು, ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ವೆಚ್ಚ ಮಿತಿಯನ್ನು ಹೆಚ್ಚಿಸಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರ ಪಾಲಿಕೆಯ ವೆಚ್ಚದ ಮಿತಿಯನ್ನು ₹1 ಕೋಟಿಯಿಂದ ₹ 3 ಕೋಟಿಗೆ ಏರಿಸಲಾಗಿದೆ. ಸ್ಥಾಯಿ ಸಮಿತಿ ವೆಚ್ಚದ ಮಿತಿಯನ್ನು ₹3 ಕೋಟಿಯಿಂದ ₹5 ಕೋಟಿಗೆ ಹಾಗೂ ಮೇಯರ್ ವೆಚ್ಚದ ಮಿತಿಯನ್ನು ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಲಾಗಿದೆ’ ಎಂದರು.
‘ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ನಗರದ ಯೋಜನಾ ಪ್ರಾಧಿಕಾರದ ಜವಾಬ್ದಾರಿ, ಟಿಡಿಆರ್ ನೀಡುವ ಅಧಿಕಾರವನ್ನು ಜಿಬಿಎಗೆ ನೀಡಲಾಗಿದೆ. ಬಿಡಿಎನ ಈ ಅಧಿಕಾರವನ್ನು ಜಿಬಿಎಗೆ ಹಸ್ತಾಂತರಿಸಲಾಗಿದೆ.
‘ಜಿಬಿಎ ಜಾರಿಗೆ ತರುವಲ್ಲಿ ಶ್ರಮಿಸಿದ ಬಿ.ಎಸ್. ಪಾಟೀಲ್, ರವಿಚಂದ್ರನ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿಗೆ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಹಾಗೂ ಮಹೇಶ್ವರ್ ರಾವ್ ಅವರ ತಂಡದ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಲಾಗುತ್ತದೆ. ರಿಜ್ವಾನ್ ಅರ್ಷದ್ ಅವರ ನೇತೃತ್ವದ ಸಮಿತಿ, ಜಿಬಿಜಿಎ ಆಡಳಿತ ಕಾಯ್ದೆಗೆ ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಸಹಕಾರ ನೀಡಿದ್ದು, ಎಲ್ಲಾ ಪಕ್ಷದ ಶಾಸಕರಿಗೆ ಅಭಿನಂದಿಸುವ ನಿರ್ಣಯ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಸರ್ಕಾರದ ಶ್ರೀರಕ್ಷೆ: ‘ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಗೆದ್ದರೂ ಸರ್ಕಾರದ ಶ್ರೀರಕ್ಷೆ ಸದಾ ಪಾಲಿಕೆ ಮೇಲೆ ಇರಬೇಕು. ಎಲ್ಲಾ ಸಂದರ್ಭಗಳಲ್ಲಿ ಅನುದಾನದ ನೆರವು ಇರಬೇಕು ಎಂದು ಮುಖ್ಯಮಂತ್ರಿಯವರನ್ನು ಜಿಬಿಎ ಅಧ್ಯಕ್ಷರನ್ನಾಗಿ ಮಾಡಿದ್ದೇವೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
‘ಎಲ್ಲಾ ಆಸ್ತಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸುಮಾರು ₹2 ಸಾವಿರ ಕೋಟಿ ಆದಾಯ ಹೆಚ್ಚಳದ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈ ವರ್ಷ ₹6,200 ಕೋಟಿ ಆದಾಯ ಬಂದಿದ್ದು, ದೆಹಲಿಯಲ್ಲಿ ಕೇವಲ ₹2 ಸಾವಿರ ಕೋಟಿ ಮಾತ್ರ ಆದಾಯವಿದೆ’ ಎಂದರು.
ಅನಿವಾರ್ಯ ಕಾರಣ: ಜಿಬಿಎ ಸದಸ್ಯರೇ ಸಭೆಗೆ ಬಂದಿಲ್ಲ ಎಂದು ಕೇಳಿದಾಗ, ‘ಸಚಿವ ಕೃಷ್ಣ ಬೈರೇಗೌಡರು ಹಾಸನದಲ್ಲಿ ಹಾಸನಾಂಬ ದೇವರ ದರ್ಶನ ಕಾರ್ಯಕ್ರಮದ ಉಸ್ತುವಾರಿಯಲ್ಲಿದ್ದಾರೆ. ಬೈರತಿ ಸುರೇಶ್ ಅವರಿಗೆ ಶಸ್ತ್ರಚಿಕಿತ್ಸೆಯಾಗಿದೆ. ಇನ್ನು ಕೆಲವರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಉಳಿದಂತೆ ವಿರೋಧ ಪಕ್ಷದವರು ಎಲ್ಲರೂ ಗೈರಾಗಿದ್ದಾರೆ’ ಎಂದು ತಿಳಿಸಿದರು.
ಜಿಬಿಎ ಸಭೆಗೆ ಹಾಜರಾದವರು: ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಶಾಸಕರಾದ ಎಂ. ಕೃಷ್ಣಪ್ಪ, ಎ.ಸಿ. ಶ್ರೀನಿವಾಸ್, ರಿಜ್ವಾನ್ ಅರ್ಷದ್, ಬಿ.ಶಿವಣ್ಣ, ಯತೀಂದ್ರ ಸಿದ್ದರಾಮಯ್ಯ, ಕೆ. ಗೋವಿಂದರಾಜು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಐದು ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಜಿ.ಎಸ್. ರಮೇಶ್, ಕೆ.ಎನ್. ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಡಾ.ಕೆ.ವಿ ರಾಜೇಂದ್ರ, ಬೆಸ್ಕಾಂ, ಬಿಡಿಎ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯ ವಿಷಯ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು. ಬಿಬಿಎಂಪಿ ಕೌನ್ಸಿಲ್ ಸಭೆ ನಡೆಯುತ್ತಿದ್ದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲಿಕೆಗಳಿಗೆ ಸಂಬಂಧಿಸಿದಂತೆ ಎರಡು ಕಾರ್ಯಸೂಚಿ ಹಾಗೂ 11 ವಿಷಯಗಳ ಬಗ್ಗೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಬಿಎ ವ್ಯಾಪ್ತಿಯ ನಾಲ್ವರು ಸಂಸದರು ರಾಜ್ಯಸಭೆ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು.
‘ಲಾಲ್‌ಬಾಗ್ ಹಾಳಾಗುವುದಿಲ್ಲ. ಅದನ್ನು ಹಾಳು ಮಾಡಿದರೆ ನನ್ನ ತಲೆ ಒಡೆದು ಹಾಕುತ್ತಾರೆ ಎಂಬುದು ನನಗೆ ಗೊತ್ತಿದೆ. ಸುರಂಗ ರಸ್ತೆ ಒಂದು ಮೂಲೆಯಲ್ಲಿ ಭೂಗರ್ಭದಲ್ಲಿ ಹೋಗುತ್ತದೆ. ಲಾಲ್‌ಬಾಗ್‌ಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ‘ಉದ್ಯಾನದ ಒಂದು ಮೂಲೆಯಲ್ಲಿ ಕಲ್ಲು ಬಂಡೆಯಿದ್ದು ಅಲ್ಲಿ ಸುರಂಗ ರಸ್ತೆಗೆ ಪ್ರವೇಶ ಕಲ್ಪಿಸಲು ಯೋಜಿಸಲಾಗಿದೆ. ಆ ಪ್ರದೇಶವನ್ನು ನಾನು ವೀಕ್ಷಣೆ ಮಾಡುತ್ತೇನೆ. ಏನಾದರೂ ತೊಂದರೆಗಳು ಬದಲಾವಣೆಗಳಿದ್ದರೆ ಅದನ್ನು ಮಾಡಿಕೊಳ್ಳೋಣ’ ಎಂದರು.
‘ಮುಂಬೈ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಬೇಕು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಜಿಬಿಎ ಅಧಿಕಾರಿಗಳಿಗೆ ಸೂಚಿಸಿದರು. ಜಿಬಿಎ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳೆಗೇರಿ ಪ್ರದೇಶಗಳಿದ್ದು ಅವುಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ ‘ಶಾಂತಿನಗರದಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದ್ದೆವು. ಅದು ಯಶಸ್ವಿಯಾಗಲಿಲ್ಲ. ಹೀಗಾಗಿ ಜನರು ಈ ವಿಚಾರದಲ್ಲಿ ಹಿಂಜರಿಯುತ್ತಾರೆ. ಅದಕ್ಕಾಗಿ ಈ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ’ ಎಂದು ತಿಳಿಸಿದರು.
‘ನಮ್ಮ ಕ್ಷೇತ್ರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಇದಕ್ಕೆ ಪರಿಹಾರ ಬೇಕು. ಇದನ್ನು ಜಿಬಿಎ ನಿಭಾಯಿಸುವುದೇ ಅಥವಾ ಪಾಲಿಕೆ ನಿಭಾಯಿಸುವುದೇ’ ಎಂದು ಶಾಸಕ ಎ.ಸಿ. ಶ್ರೀನಿವಾಸ್ ಅವರು ಕೇಳಿದಾಗ ‘ಕಸ ವಿಲೇವಾರಿ ವಿಚಾರವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 33 ಪ್ಯಾಕೇಜ್ ಟೆಂಡರ್ ಕರೆಯಲಾಗುವುದು. ಕಸ ವಿಲೇವಾರಿ ಜವಾಬ್ದಾರಿ ಸ್ಥಳೀಯ ಪಾಲಿಕೆಗಳು ನಿಭಾಯಿಸಲಿವೆ. ಇದರ ಸಮನ್ವಯತೆಯನ್ನು ಜಿಬಿಎ ಮಾಡಲಿದೆ’ ಎಂದರು.
ಆನೇಕಲ್ ಶಾಸಕರು ತಮ್ಮ ಪ್ರದೇಶವನ್ನು ಜಿಬಿಎ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದಾಗ ‘ಈಗ ಘೋಷಣೆ ಆಗಿರುವ ಜಿಬಿಎ ವ್ಯಾಪ್ತಿಯಲ್ಲಿ ಮೊದಲು ಚುನಾವಣೆ ಆಗಲಿದೆ. ನಂತರ ಎಲ್ಲೆಲ್ಲಿ ಅಭಿವೃದ್ಧಿ ಆಗಿದೆ ಆ ಜಾಗಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲು ಸಮಿತಿ ರಚಿಸಿ ಯಾವ ಪ್ರದೇಶ ಸೇರಿಸಬೇಕು ಎಂದು ತೀರ್ಮಾನ ಮಾಡಲಾಗುವುದು. ಚುನಾವಣೆ ನಂತರ ಈ ಪ್ರಕ್ರಿಯೆಗೆ ಕೈಹಾಕಲಾಗುವುದು’ ಎಂದು ಹೇಳಿದರು.
ಪರಿಷತ್ ಸದಸ್ಯ ಗೋವಿಂದರಾಜು ಅವರು ‘ಬೀದಿ ವ್ಯಾಪಾರಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ’ ಎಂದು ಕೇಳಿದಾಗ ‘30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿಯಾಗಿದ್ದು ಅವರಿಗೆ ನಾಲ್ಕು ರೀತಿಯ ವಾಹನ ನೀಡಲು ಸಿದ್ಧತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಅವರು ‘ಅನಾಥ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಸಂಚಾರ ದಟ್ಟಣೆ ಹಾಗೂ ಕಸದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ನಗರದ ಹೊರಗೆ 10 ಎಕರೆ ಪ್ರದೇಶ ಗುರುತಿಸಿ ಅಲ್ಲಿಗೆ ಈ ವಾಹನಗಳನ್ನು ಸ್ಥಳಾಂತರ ಮಾಡಬೇಕು’ ಎಂದರು. ‘ಈ ಜಾಗಗಳನ್ನು ಗುರುತಿಸಿ ಅಲ್ಲಿ ಕಾಂಪೌಂಡ್ ಹಾಕಿ ವಾಹನಗಳನ್ನು ಸ್ಥಳಾಂತರಿಸಿ. ಆಗ ವಾಹನಗಳನ್ನು ಬೇರೆಯವರು ಕದಿಯಲು ಆಗುವುದಿಲ್ಲ’ ಎಂದು ಶಿವಕುಮಾರ್ ಹೇಳಿದರು.
ನಗರದಲ್ಲಿ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೆಂಗಳೂರು ಸ್ಮಾರ್ಟ್ಇನ್‌ಫ್ರಾಸ್ಟ್ರಕ್ಚರ್ ನಿಯಮಿತದ (ಬಿ-ಸ್ಮೈಲ್) ಯೋಜನೆಗಳಿಗೆ ಜಿಬಿಎ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
₹45000 ಕೋಟಿ; ಎರಡು ಸುರಂಗ ರಸ್ತೆ
₹18204 ಕೋಟಿ; 126.44 ಕಿ.ಮೀ ಉದ್ದದ 13 ಎತ್ತರಿಸಿದ ಕಾರಿಡಾರ್‌ಗಳು
₹9000 ಕೋಟಿ; 40 ಕಿ.ಮೀ ಉದ್ದದ ಮೆಟ್ರೊ ಸಂಯೋಜಿತ ಡಬ್ಬಲ್ ಡೆಕರ್
₹3000 ಕೋಟಿ; ರಾಜಕಾಲುವೆಗಳ ಪಕ್ಕದಲ್ಲಿ ಸುಮಾರು 380 ಕಿಮೀ ಉದ್ದ ಬಫರ್ ಸರ್ವಿಸ್ ರಸ್ತೆ
₹1700 ಕೋಟಿ; 145.86 ಕಿ.ಮೀ ಉದ್ದದ ರಸ್ತೆಗಳಲ್ಲಿ ಸಮಗ್ರ ಅಭಿವೃದ್ಧಿ ವೈಟ್ ಟಾಪಿಂಗ್
₹400 ಕೋಟಿ; ವಿಶ್ವದರ್ಜೆಯ 20.50 ಕಿ.ಮೀ ಐ.ಟಿ ಕಾರಿಡಾರ್ ಹೊರವರ್ತುಲ ರಸ್ತೆ
ವಿವಿಧ ಇಲಾಖೆ/ಸಂಸ್ಥೆಗಳೊಂದಿಗೆ ಈಜಿಪುರ ಮೇಲ್ಸೇತುವೆ ಕಾಮಗಾರಿ ಬೈಯಪ್ಪನಹಳ್ಳಿ ರೋಟರಿ ಕಾಮಗಾರಿ ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿಗಳು
ಜಿಬಿಎ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಧಿಕಾರಿಗಳ ಸಮಿತಿ ರಚಿಸಲು ಮುಖ್ಯ ಆಯುಕ್ತರಿಗೆ ಅಧಿಕಾರ
ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಮಹಾಯೋಜನೆ (ಮಾಸ್ಟರ್ ಪ್ಲಾನ್) ತಯಾರಿಕೆ ಬಿಡಿಎಯಿಂದ ಜಿಬಿಎಗೆ ಹಸ್ತಾಂತರ
ಜಿಬಿಎಯಿಂದ ಟಿಡಿಆರ್/ಡಿಆರ್‌ಸಿ ಹಾಗೂ ಬಳಕೆ ಪ್ರಮಾಣ ಪತ್ರಗಳ ವಿತರಣೆ
ಎಲ್ಲಾ ನಗರ ಪಾಲಿಕೆಗಳು ತಮ್ಮ ಕರಡು ವಾರ್ಷಿಕ ಆಯವ್ಯಯವನ್ನು ಜಿಬಿಎ ಪರಿಶೀಲನೆಗೆ ಸಲ್ಲಿಸಬೇಕು. ಜಿಬಿಎ ಮೂಲಕ ಸರ್ಕಾರದ ಅನುಮೋದನೆಗೆ ಕಳುಹಿಸಬೇಕು
ಬೆಸ್ಕಾಂ ಜಲಮಂಡಳಿ ಬಿಎಂಟಿಸಿ ಬೆಂಗಳೂರು ಸಂಚಾರ ಪೊಲೀಸರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಐದು ನಗರ ಪಾಲಿಕೆಗಳು ಹಾಗೂ 10 ವಲಯಗಳಲ್ಲಿ ಪ್ರತಿಯೊಂದಕ್ಕೂ ಸಂಪರ್ಕ ಬಿಂದು ಅಧಿಕಾರಿಯನ್ನು (ಪಿಒಸಿ) ನೇಮಿಸಬೇಕು
ಜಿಬಿಎ ಕಾರ್ಯಕಾರಿ ಸಮಿತಿ ಕಾರ್ಯಕಾರಿ ಸಮಿತಿ ಕೇಂದ್ರ ಸಂಯೋಜನಾ ಸಮಿತಿ ರಚನೆಗೆ ಅನುಮೋದನೆ
ಐದು ನಗರ ಪಾಲಿಕೆಗಳ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ತಾತ್ಕಾಲಿಕ ಕಾರ್ಯಾಚರಣೆ ಸ್ಥಳಗಳಿಗೆ ಸಮ್ಮತಿ
ಜಿಬಿಎ ಮುಖ್ಯ ಆಯುಕ್ತರು ಪ್ರತಿ ವರ್ಷ ಅಗತ್ಯ ಅನುಮೋದನೆ ಮತ್ತು ಅನುದಾನಗಳ ಬಿಡುಗಡೆ ಏಕೀಕೃತ ಬಜೆಟ್ ಅನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಜಿಬಿಎ ವತಿಯಿಂದ ಸರ್ಕಾರದ ಅನುದಾನಗಳನ್ನು ಕಾರ್ಯತಂತ್ರದ ಹೂಡಿಕೆ ಯೋಜನೆಯಲ್ಲಿ (ಎಸ್ಐಪಿ) ನಿರ್ವಹಣೆ. ಐದು ನಗರ ಪಾಲಿಕೆಗಳಿಗೆ ₹613.6 ಕೋಟಿ ವಿತರಣೆಗೆ ಅನುಮೋದನೆ
ಜಿಬಿಎ ಮುಖ್ಯ ಆಯುಕ್ತರು ₹10 ಕೋಟಿವರೆಗಿನ ಯೋಜನೆಗಳಿಗೆ ಅನುಮೋದನೆ ನೀಡಲು ಸಮ್ಮತಿ
ಕೇಂದ್ರ ನಗರ ಪಾಲಿಕೆ; ಅನೆಕ್ಸ್–3 ಕಟ್ಟಡ ಜಿಬಿಎ ಆವರಣ
ಪೂರ್ವ ನಗರ ಪಾಲಿಕೆ; ಮಹದೇವಪುರ ಹೊರ ವರ್ತುಲ ರಸ್ತೆ ( ಮೆಟ್ರೊ ನಿಲ್ದಾಣದ ಬಳಿ)
ಪಶ್ಚಿಮ ನಗರ ಪಾಲಿಕೆ; ವಿಜಯನಗರ ಬಿಡಿಎ ಸಂಕೀರ್ಣ (1.5 ಎಕರೆ) ಅಥವಾ ಅತಿಗುಪ್ಪೆ (3.5 ಎಕರೆ)
ಉತ್ತರ ನಗರ ಪಾಲಿಕೆ: ಚೊಕ್ಕನಹಳ್ಳಿ ಗ್ರಾಮ ಸರ್ವೆ ನಂಬರ್ 75/4 (2 ಎಕರೆ)
ದಕ್ಷಿಣ ನಗರ ಪಾಲಿಕೆ; ಬನಶಂಕರಿ ಮೆಟ್ರೊ ನಿಲ್ದಾಣದ ಹತ್ತಿರ (3 ಎಕರೆ ಖಾಲಿ ಜಾಗ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.