ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ರಚನೆಯಾಗಿರುವ ಐದು ನಗರ ಪಾಲಿಕೆಗಳ ಕೌನ್ಸಿಲ್ ಸಭಾಂಗಣದಲ್ಲಿ ತಲಾ 150 ಸದಸ್ಯರು ಕುಳಿತುಕೊಳ್ಳುವಂತೆ ವಿನ್ಯಾಸ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ), ಪಶ್ಚಿಮ ನಗರ ಪಾಲಿಕೆ (ಬಿಡಬ್ಲ್ಯುಸಿಸಿ), ಉತ್ತರ ನಗರ ಪಾಲಿಕೆ (ಬಿಎನ್‌ಸಿಸಿ), ದಕ್ಷಿಣ ನಗರ ಪಾಲಿಕೆಗಳಿಗೆ (ಬಿಎಸ್‌ಸಿಸಿ) ಹೊಸ ಕಟ್ಟಡಗಳ ವಿನ್ಯಾಸಗೊಳಿಸಲು ಆಸಕ್ತರಿಗೆ ಜಿಬಿಎಯಿಂದ ಆಹ್ವಾನ ನೀಡಲಾಗಿದೆ. ಈ ಟೆಂಡರ್ ಆಹ್ವಾನದಂತೆ 150 ಸದಸ್ಯರು ಆಸೀನರಾಗುವಂತಹ ಕೌನ್ಸಿಲ್ ಸಭಾಂಗಣ ನಿರ್ಮಿಸಲು ಹೇಳಲಾಗಿದೆ.
ಬಿಇಸಿಸಿಯಲ್ಲಿ 63 ವಾರ್ಡ್, ಬಿಡಬ್ಲ್ಯುಸಿಸಿಯಲ್ಲಿ 117 ವಾರ್ಡ್, ಬಿಎನ್‌ಸಿಸಿಯಲ್ಲಿ 90 ವಾರ್ಡ್, ಬಿಎಸ್‌ಸಿಸಿಯಲ್ಲಿ 90 ವಾರ್ಡ್ ರಚನೆಯಾಗುವ ಪ್ರಸ್ತಾವವಿದೆ. ವಾರ್ಡ್ ಪುನರ್ ವಿಂಗಡಣಾ ಆಯೋಗ ವಾರ್ಡ್ ರಚನೆಗಳ ಬಗ್ಗೆ ವರದಿ ತಯಾರಿಸುತ್ತಿದ್ದು, ಸೆ.23ಕ್ಕೆ ಕರಡು ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ಮಧ್ಯೆ, ಜಿಬಿಎಯ ಮುಖ್ಯ ಆಡಳಿತ ಕಟ್ಟಡ ಮತ್ತು ಬಿಇಸಿಸಿ, ಬಿಡಬ್ಲ್ಯುಸಿಸಿ, ಬಿಎನ್‌ಸಿಸಿ, ಬಿಎಸ್‌ಸಿಸಿಗಳ ಆಡಳಿತ ಕಟ್ಟಡವನ್ನು ನಿರ್ಮಿಸಲು ಏಕ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.
ಶಾಂತಿನಗರ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಈ ಟೆಂಡರ್ ಅನ್ನು ಆಹ್ವಾನಿಸಿದ್ದು, ಯಾವ ಸೌಲಭ್ಯಗಳು ಇರಬೇಕು ಎಂಬುದನ್ನು ನಮೂದಿಸಲಾಗಿದೆ. ವಾಸ್ತು ಶಿಲ್ಪಿಗಳು/ ಆರ್ಕಿಟೆಕ್ಟ್ ಸಂಸ್ಥೆಗಳು ಸೆ.23ಕ್ಕೆ ವಿನ್ಯಾಸಗಳ ಪ್ರಸ್ತಾವ ಸಲ್ಲಿಸಲು ಅಂತಿಮ ದಿನವಾಗಿದೆ.
ನಗರ ಪಾಲಿಕೆಗಳಿಗೆ ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರಿಗೂ ಅನುವಾಗಲು ಕೌನ್ಸಿಲ್ ಸಭಾಂಗಣವನ್ನು ವಿಶಾಲವಾಗಿ ರೂಪಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರ ಪಾಲಿಕೆಗಳಿಗೆ ಹೆಚ್ಚುವರಿ ಪ್ರದೇಶಗಳು ಸೇರಿಕೊಂಡು ಸದಸ್ಯರ ಸಂಖ್ಯೆ ಅಧಿಕವಾದರೆ ಆಸನಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶವೂ ಹೊಸ ಕಟ್ಟಡಗಳಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ (ಬಿಸಿಸಿಸಿ) ಈಗಿರುವ ಜಿಬಿಎ ಕಟ್ಟಡದಲ್ಲೇ, ಆಡಳಿತಾತ್ಮಕ ಕಚೇರಿಗಳು, ಕೌನ್ಸಿಲ್ ಸಭೆ ನಡೆಸಲು ಅವಕಾಶ ಮಾಡಿಕೊಡಲು ಅನೆಕ್ಸ್ ಕಟ್ಟಡಗಳನ್ನು ನೀಡುವ ಬಗ್ಗೆ ಆಲೋಚಿಸಲಾಗುತ್ತಿದೆ. ಆದ್ದರಿಂದ ಹೊಸ ವಿನ್ಯಾಸದ ಪ್ರಸ್ತಾವದಲ್ಲಿ ಬಿಸಿಸಿಸಿಯನ್ನು ಸೇರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ನಗರ ಪಾಲಿಕೆ ಕಟ್ಟಡದಲ್ಲಿ ಏನೇನಿರಲಿದೆ?
ಆಯುಕ್ತರ ಕಚೇರಿ, ಸಭಾಂಗಣ
ಮೇಯರ್ ಕಚೇರಿ, ಉಪ ಮೇಯರ್ ಕಚೇರಿ
150 ಸದಸ್ಯರಿಗಾಗಿ ಕೌನ್ಸಿಲ್ ಸಭಾಂಗಣ
20 ಸಮಿತಿ ಕೊಠಡಿ
ಸಭಾಂಗಣಗಳು
ಕ್ಯಾಂಟೀನ್
ಕೇಂದ್ರೀಕೃತ ನಿಯಂತ್ರಣ ಕೊಠಡಿ
ಸ್ಟ್ರಾಂಗ್ ರೂಂ/ ಸ್ಟೋರ್ ರೂಂ
ವಲಯ –1 ಮತ್ತು 2ರ ಜಂಟಿ ಆಯುಕ್ತರರ ಕಚೇರಿಗಳು, ಸಭಾಂಗಣ, ಉಪ ಆಯುಕ್ತರು, ಮುಖ್ಯ ಎಂಜಿನಿಯರ್, ಹಣಕಾಸು ವಿಭಾಗ, ಅಧೀಕ್ಷಕ ಎಂಜಿನಿಯರ್, ನಗರ ಯೋಜನೆ, ಸಮಿತಿ ಕೊಠಡಿಗಳು. ಹೆಚ್ಚುವರಿ ಆಯುಕ್ತರ ಕೊಠಡಿ ಮತ್ತು ಕಚೇರಿ ಸಭಾಂಗಣ. ಅರಣ್ಯ, ತೋಟಗಾರಿಕೆ, ಆರೋಗ್ಯ–ವಿಪತ್ತು ನಿರ್ವಹಣೆ, ಬಿಎಂಟಿಎಫ್, ಕಾನೂನು, ಭದ್ರತೆ, ಎಂಪಿಡಿ ವಿಭಾಗಗಳಿಗೆ ಕಚೇರಿ ಹಾಗೂ ಸಾಮಾನ್ಯ ಸೌಲಭ್ಯಗಳು.
ಟೆಂಡರ್ ಪರಿಶೀಲನಾ ಸಮಿತಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಂತದಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್‌ಗಳ ತಾಂತ್ರಿಕ ಮತ್ತು ಆರ್ಥಿಕ ಪರಿಶೀಲನಾ ಸಮಿತಿಯನ್ನು ರಚಿಸಿ ನಗರಾಭಿವೃದ್ಧಿ ಇಲಾಖೆ ಗುರುವಾರ ಆದೇಶಿಸಿದೆ.
ಸಮಿತಿ: ಅಧ್ಯಕ್ಷ– ಜಿಬಿಎ ಮುಖ್ಯ ಆಯುಕ್ತ ಸದಸ್ಯರು– ಜಿಬಿಎ ಆಡಳಿತದ ವಿಶೇಷ ಆಯುಕ್ತ ಜಿಬಿಎ ಪ್ರಧಾನ ಎಂಜಿನಿಯರ್. ಸದಸ್ಯ ಕಾರ್ಯದರ್ಶಿ– ಕಾಮಗಾರಿಗೆ ಸಂಬಂಧಿಸಿದ ಜಿಬಿಎ ಮುಖ್ಯ ಎಂಜಿನಿಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.