
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗುವ ಪ್ರದೇಶಗಳಿಗೆ ಸೀಮಿತವಾಗಿ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆ - 2025ರಲ್ಲಿ ಪ್ರಕರಣ 30ಕ್ಕೆ ಪ್ರಸ್ತಾಪಿಸಿರುವ ತಿದ್ದುಪಡಿಯಂತೆ, ಜಿಬಿಎಗೆ ಸೇರುವ ಸ್ಥಳಿಯ ಪ್ರದೇಶದ ಸಾಮಾನ್ಯ ನಿವಾಸಿಯನ್ನು ಪ್ರತಿ 20 ಸಾವಿರ ಜನ ಸಂಖ್ಯೆಗೆ ಕನಿಷ್ಠ ಒಬ್ಬರಂತೆ, ನಿರ್ದಿಷ್ಟ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಾಮ ನಿರ್ದೇಶಿತ ಸದಸ್ಯ ಚುನಾಯಿತ ಪ್ರತಿನಿಧಿಯಲ್ಲದ ಕಾರಣ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರ ಹೊಂದಿರುವುದಿಲ್ಲ. ಅಲ್ಲದೆ ಚುನಾವಣೆ ನಡೆಸುವವರೆಗೆ ಮಾತ್ರ ನಾಮನಿರ್ದೇಶಿತ ಸದಸ್ಯನಾಗಿ ಮುಂದುವರಿಯಲು ಅವಕಾಶವಿರುತ್ತದೆ.
ಯಾವುದಾದರೂ ಪಂಚಾಯಿತಿ ಪ್ರದೇಶದ ಭಾಗವನ್ನು ಚಿಕ್ಕ ನಗರ ಪ್ರದೇಶದಲ್ಲಿ ವಿಲೀನಗೊಳಿಸಿದ ಸಂದರ್ಭದಲ್ಲಿ, ಮುನ್ಸಿಪಲ್ ಕೌನ್ಸಿಲ್ ಅನ್ನು ಪುನರ್ ರಚಿಸುವವರೆಗೆ ಅಂತಹ ಪ್ರದೇಶದ ಸಾಮಾನ್ಯ ನಿವಾಸಿಯಾಗಿರುವ ವ್ಯಕ್ತಿಯನ್ನು ಹೆಚ್ಚುವರಿ ಕೌನ್ಸಿಲರ್ ಆಗಿ ಸರ್ಕಾರವು ನಾಮ ನಿರ್ದೇಶನಗೊಳಿಸುವ ಬಗ್ಗೆ ಕರ್ನಾಟಕ ಮುನ್ಸಿಪಾಲಿಟಿ ಅಧಿನಿಯಮ, 1964ರ ಪ್ರಕರಣ 360 (ಡಿ) ರಲ್ಲಿ ಅವಕಾಶ ಕಲ್ಪಿಸಲಾಗಿದೆ.
ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಬದ್ದವಾಗಿದೆ. ಒಟ್ಟು 369 ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಈ ರೀತಿ ವಾರ್ಡ್‌ಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.