ADVERTISEMENT

Greater Bengaluru Survey | ಜಿಬಿಎ: 3ರಿಂದ ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 0:56 IST
Last Updated 1 ಅಕ್ಟೋಬರ್ 2025, 0:56 IST
   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್‌ 3ರಿಂದ ಪ್ರಾರಂಭಿಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ 32 ಲಕ್ಷ ಮನೆಗಳಿದ್ದು, 17 ಸಾವಿರ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ತಡವಾಗಿ ಸಮೀಕ್ಷೆ ಪ್ರಾರಂಭಿಸುವುದಕ್ಕೆ ಆಯೋಗದಿಂದ ಅನುಮತಿ ತೆಗೆದುಕೊಳ್ಳಲಾಗಿದೆ. ಒಂದು ಬಾರಿ ಸಮೀಕ್ಷೆ ಆರಂಭವಾದ ಮೇಲೆ ಮುಗಿಯುವವರೆಗೂ ನಿಲ್ಲಿಸುವುದಿಲ್ಲ ಎಂದು ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದರು.

ಜಿಬಿಎ, ನಗರ ಪಾಲಿಕೆಯಲ್ಲದೆ ಯಾವುದೇ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವ ಅಧಿಕಾರವನ್ನು ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರ ನೀಡಿದೆ. ಹೀಗಾಗಿ, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಸೋಮವಾರ ಒಂದು ಹಂತದ ತರಬೇತಿ ಮುಗಿದಿದ್ದು, ಅಕ್ಟೋಬರ್ 2ರಂದು ಮತ್ತೆ ತರಬೇತಿ ನೀಡಿ, 3ರಿಂದ ಸಮೀಕ್ಷೆ ಆರಂಭಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

‘ಕೆಲವರು ವೈಯಕ್ತಿಕ ಹಾಗೂ ಅನಾರೋಗ್ಯದ ಕಾರಣ ತರಬೇತಿಗೆ ಹಾಜರಾಗಿಲ್ಲ. ಸೂಕ್ತ ಕಾರಣಗಳಿದ್ದರೆ ಅವುಗಳನ್ನು ನಾವು ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ, ತರಬೇತಿ, ಸಮೀಕ್ಷೆಗೆ ಹಾಜರಾಗುವುದು ಕಡ್ಡಾಯ’ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಸಹನೀಯವಲ್ಲ’ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ  ಮಹೇಶ್ವರ್ ರಾವ್ ಹೇಳಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ- 2025ಕ್ಕೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿಗಳು  ಹಾಗೂ ಸಹಾಯಕ ನೋಂದಣಾಧಿಕಾರಿಗಳ 2ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಹಾಗೂ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.