ADVERTISEMENT

ಬೆಂಗಳೂರು: 303 ಗ್ರಾಮ ಜಿಬಿಎ ಯೋಜನಾ ಪ್ರದೇಶ

ಬಿಎಂಐಸಿಎಪಿಎ ಪ್ರದೇಶ ಸದ್ಯಕ್ಕೆ ಸೇರಿಲ್ಲ; ಮಾಸ್ಟರ್‌ ಪ್ಲಾನ್‌ನಂತೆಯೇ ಕೆಐಎಡಿಬಿ ಅನುಮೋದನೆ ನೀಡಬೇಕು

ಆರ್. ಮಂಜುನಾಥ್
Published 13 ಅಕ್ಟೋಬರ್ 2025, 23:02 IST
Last Updated 13 ಅಕ್ಟೋಬರ್ 2025, 23:02 IST
–
   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಗರ ಯೋಜನೆಯ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.

‘ಗ್ರೇಟರ್‌ ಬೆಂಗಳೂರು ಪ್ರದೇಶ’ವನ್ನು (ಹಿಂದಿನ ಬಿಬಿಎಂಪಿ)  ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವೆಂದು ಘೋಷಿಸಲಾಗಿದ್ದು, ನಗರ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಬಿಎಗೆ ವಹಿಸಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ– 1961ರಂತೆ ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವನ್ನು ಅಕ್ಟೋಬರ್‌ 10ರಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ADVERTISEMENT

ಬಿಡಿಎ ಹಾಗೂ ಸರ್ಕಾರದಿಂದ ಈ ಹಿಂದಿನ ಎಲ್ಲ ನಿಯಮಗಳು, ಆದೇಶಗಳು, ನಿರ್ದೇಶನಗಳು, ಅನುಮೋದನೆ/ಮಂಜೂರಾತಿಗಳು ಮುಂದುವರಿಯಲಿವೆ.  ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದ ಮಹಾಯೋಜನೆ ಅನುಮೋದನೆಯಾಗುವವರೆಗೂ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ (ಆರ್‌ಎಂಪಿ–2015) ಮತ್ತು ವಲಯ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.

ಬಿಡಿಎಯಿಂದ ನಗರ ಯೋಜನೆ ಜವಾಬ್ದಾರಿಯನ್ನು ಜಿಬಿಎಗೆ ವಹಿಸಬೇಕೆಂಬ ನಿರ್ಣಯ ಜಿಬಿಎ ಮೊದಲ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆ ಪ್ರಕಾರ ಅಧಿಸೂಚನೆ ಹೊರಡಿಸಲಾಗಿದೆ.

ಜಿಬಿಎ ‘ಯೋಜನಾ ಪ್ರಾಧಿಕಾರ’ವೂ ಆಗಿದ್ದು, ತನ್ನ ವ್ಯಾಪ್ತಿಯಲ್ಲಿನ ವಸತಿ ಬಡಾವಣೆಗಳು, ಕೈಗಾರಿಕಾ ಬಡಾವಣೆಗಳನ್ನು ಅನುಮೋದಿಸುವ ಅಧಿಕಾರವನ್ನು ಹೊಂದಿದೆ. ಅಲ್ಲದೆ ನಗರದ ಮಾಸ್ಟರ್‌ ಪ್ಲಾನ್‌ ತಯಾರಿಸುವ ಜವಾಬ್ದಾರಿಯನ್ನು ಹೊಂದಿದ್ದು, ಅದನ್ನು ನಗರ ಪಾಲಿಕೆಗಳು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮೇಲ್ವಿಚಾರಣೆ ಮಾಡಲಿದೆ.

ಜಿಬಿಎ ರೂಪಿಸುವ ಮಾಸ್ಟರ್‌ ಪ್ಲಾನ್‌ನಂತೆಯೇ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ತನ್ನ ವ್ಯಾಪ್ತಿಯ ಕೈಗಾರಿಕಾ ಬಡಾವಣೆ ಹಾಗೂ ಕಟ್ಟಡಗಳ ನಕ್ಷೆಯನ್ನು ಅನುಮೋದಿಸಬೇಕಾಗುತ್ತದೆ.

ಯೋಜನಾ ಪ್ರಾಧಿಕಾರವಾಗಿರುವ ಜಿಬಿಎ ತನ್ನ ವಾರ್ಷಿಕ ವರದಿ, ಲೆಕ್ಕ ತಪಾಸಣಾ ವರದಿ, ಆಯವ್ಯಯವನ್ನು ಪ್ರತಿ ಹಣಕಾಸು ವರ್ಷದ ಅಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಸ್ಥಳೀಯ ಯೋಜನಾ ಪ್ರಕ್ರಿಯೆಗಳನ್ನು ನಿರ್ವಹಿಸಲು ಜಿಬಿಎ ಮುಖ್ಯ ಆಯುಕ್ತರು ಅಧಿಕಾರಿಗಳ ಸಮಿತಿಯನ್ನು ರಚಿಸಲಿದ್ದಾರೆ. ಈಗಾಗಲೇ ಜಿಬಿಎಯಲ್ಲಿ ನಗರ ಯೋಜನೆ ಅಧಿಕಾರಿಗಳಿದ್ದು, ಅವರನ್ನು ಒಳಗೊಂಡ ಸಮಿತಿ ಕಾರ್ಯನಿರ್ವಹಿಸಲಿದೆ.

ಬಿಎಂಐಸಿಎಪಿಎ ಸೇರಿಲ್ಲ: ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದಲ್ಲಿ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ನ ಸ್ಥಳೀಯ ಯೋಜನಾ ಪ್ರದೇಶವನ್ನು (ಬಿಎಂಐಸಿಎಪಿಎ) ಸೇರಿಸಿಲ್ಲ. ಹೀಗಾಗಿ, 719.29 ಚದರ ಕಿ.ಮೀ ವ್ಯಾಪ್ತಿಯ ಜಿಬಿಎ ಪ್ರದೇಶದಲ್ಲಿ, 683 ಚದರ ಕಿ.ಮೀ ಮಾತ್ರ ಈಗ ‘ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವಾಗಿದೆ. ನೈಸ್‌ನೊಂದಿಗೆ ಭೂ ವ್ಯಾಜ್ಯ ಇರುವುದರಿಂದ ಈ ಪ್ರದೇಶವನ್ನು ಸದ್ಯಕ್ಕೆ ಸೇರಿಸಿಲ್ಲವಾದರೂ, ಮುಂದಿನ ದಿನಗಳಲ್ಲಿ ಸೇರಿಸಲಾಗುತ್ತದೆ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.