ADVERTISEMENT

ಗ್ರೇಟರ್‌ ಬೆಂಗಳೂರು ಆಡಳಿತ ತಿದ್ದುಪಡಿ ಮಸೂದೆಗೆ ಅಂಗೀಕಾರ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 20:23 IST
Last Updated 19 ಆಗಸ್ಟ್ 2025, 20:23 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಐದು ವರ್ಷದವರೆಗೆ ಹೊಸದಾಗಿ ಯಾವುದೇ ಹಳ್ಳಿಗಳನ್ನು ಸೇರ್ಪಡೆ ಮಾಡುವುದಿಲ್ಲ. ಚುನಾವಣೆ ನಡೆದು ಮೊದಲ ಚುನಾಯಿತ ಸದಸ್ಯರ ಅವಧಿ ಮುಗಿದ ನಂತರವೇ ಈ ಕುರಿತು ತೀರ್ಮಾನಿಸಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ತಿದ್ದುಪಡಿ ಮಸೂದೆ ಮಂಡಿಸಿ ಮಾತನಾಡಿದ ಅವರು, ಕಾಯ್ದೆಯಲ್ಲಿ ಬೆಂಗಳೂರು ವ್ಯಾಪ್ತಿಯ ನಗರ ಪಾಲಿಕೆಗಳ ಆಡಳಿತ ಅಧಿಕಾರದ ಕೆಲ ಅಂಶಗಳಿಗೆ ಸ್ಪಷ್ಟತೆ ಬೇಕಿದ್ದ ಕಾರಣ ಸಣ್ಣ ತಿದ್ದುಪಡಿ ತರಲಾಗಿದೆ ಎಂದರು.

ADVERTISEMENT

‘ಕಾಯ್ದೆ ಜಾರಿಯಾಗಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ’ ಎಂದು ತಿಳಿಸಿದರು.

‘ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ. ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯಚಟುವಟಿಕೆಯಲ್ಲಿ ಜಿಬಿಜಿಎ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆ ನೀಡಲು ಈ ತಿದ್ದುಪಡಿ ತರಲಾಗಿದೆ’ ಎಂದು ಬಿಜೆಪಿಯ ಸುರೇಶ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರ ನೀಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೆ ಸಂಪೂರ್ಣ ಅಧಿಕಾರ ಇರಬೇಕು ಎಂಬುದು ನಮ್ಮ ಉದ್ದೇಶ. ಮುಂದೆ ನಾನು, ನೀವು ಅಧಿಕಾರದಲ್ಲಿ ಇರುತ್ತೇವೋ ಇರುವುದಿಲ್ಲವೋ ಗೊತ್ತಿಲ್ಲ. ಆದರೆ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಅದನ್ನು ತೆಗೆದುಹಾಕಿದ್ದೇವೆ’ ಎಂದು ಬಿಜೆಪಿಯ ಡಾ. ಸಿ.ಎನ್‌. ಅಶ್ವತ್ಥ್‌ ನಾರಾಯಣ ಅವರಿಗೆ ಶಿವಕುಮಾರ್‌ ಮಾಹಿತಿ ನೀಡಿದರು.

‘ಕಾಂಗ್ರೆಸ್ ಪಕ್ಷವು ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ ತಂದಿರುವ  73, 74ನೇ ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಮುಟ್ಟಲು ಬಿಡುವುದಿಲ್ಲ. ನಗರ ಪಾಲಿಕೆಗಳ ಹಿತ ಕಾಪಾಡಲು ಕಾಯ್ದೆ ತರಲಾಗಿದೆ’ ಎಂದರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ಗ್ರೇಟರ್‌ ಬೆಂಗಳೂರು ಎಂಬ ಆಂಗ್ಲ ಪದ ಬಳಕೆ ಮಾಡಲಾಗಿದೆ. ಸಭಾಧ್ಯಕ್ಷರ ಕನ್ನಡವೇ ಎಷ್ಟೋ ವಾಸಿ. ಡಿ.ಕೆ. ಶಿವಕುಮಾರ್‌ ಅವರು ಕನ್ನಡವನ್ನು ಮುಳುಗಿಸುತ್ತಿದ್ದಾರೆ’ ಎಂದು ದೂಷಿಸಿದರು. ‘ಮಹಾನ್‌ ಬೆಂಗಳೂರು’ ಎಂದು ಹೆಸರು ಬದಲಿಸಲು ಬಿಜೆಪಿಯ ಎಸ್‌.ಸುರೇಶ್‌ಕುಮಾರ್ ಸಲಹೆ ನೀಡಿದರು.

‘ನಮ್ಮ ವ್ಯಾಪ್ತಿಯ ಹಳ್ಳಿಗಳನ್ನು ಗ್ರೇಟರ್‌ ಬೆಂಗಳೂರು ಪ್ರದೇಶಕ್ಕೆ (ಜಿಬಿಎ) ಸೇರಿಸಿಲ್ಲ ಎಂದು ಬಿಜೆಪಿಯ ಸತೀಶ್‌ ರೆಡ್ಡಿ ಕೇಳಿದರು. ‘ಈಗ ಹಳ್ಳಿಗಳನ್ನು ಸೇರಿಸಿದರೆ ಪಂಚಾಯಿತಿ ಸದಸ್ಯ ಪಾಲಿಕೆ ಸದಸ್ಯನಾಗಬೇಕಾಗುತ್ತದೆ. ಇದಕ್ಕೆ ಮತ್ತೆ ಆಕ್ಷೇಪಣೆಗಳು ಬರುತ್ತವೆ. ಮೊದಲು ನಾವು ಈಗಿರುವ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆ ನಡೆಸಿ, ನಂತರ ಚರ್ಚೆ ಮಾಡಿ ಯಾವ ಯಾವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂದು ತೀರ್ಮಾನ ಮಾಡೋಣ’ ಎಂದು ಶಿವಕುಮಾರ್‌ ಹೇಳಿದರು.

‘ಬೆಂಗಳೂರು ಅಷ್ಟೆ ಅಲ್ಲ, ವಿಧಾನಸಭಾ ಕ್ಷೇತ್ರಗಳನ್ನೂ ವಿಭಜಿಸಿ, ಬೇರೆ ಬೇರೆ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಹಲವು ಲೋಪಗಳಿವೆ’ ಎಂಬ ವಿರೋಧ ಪಕ್ಷಗಳ ಆರೋಪ, ವಿರೋಧದ ಮಧ್ಯೆ ಮಸೂದೆ ಅಂಗೀಕಾರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.