ADVERTISEMENT

‘ಗ್ರೇಟರ್‌ ಮಾಸ್ಟರ್‌ ಪ್ಲಾನ್‌’ ರೂಪಿಸಲು ಟೆಂಡರ್‌ ಆಹ್ವಾನ

ಸ್ಥಳೀಯ ಯೋಜನಾ ಪ್ರದೇಶದಲ್ಲಿ ಜಿಐಎಸ್‌ ಆಧರಿತ ಯೋಜನೆ

ಆರ್. ಮಂಜುನಾಥ್
Published 24 ಡಿಸೆಂಬರ್ 2025, 23:26 IST
Last Updated 24 ಡಿಸೆಂಬರ್ 2025, 23:26 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿರುವ, ಬೆಂಗಳೂರು ಕೇಂದ್ರ ಪೇಟೆ ಪ್ರದೇಶ ಹಾಗೂ 308 ಗ್ರಾಮಗಳ ವ್ಯಾಪ್ತಿಗೆ ‘ಗ್ರೇಟರ್‌ ಮಾಸ್ಟರ್‌ ಪ್ಲಾನ್‌’ ರಚಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ.

ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ ಎಂದು ಗುರುತಿಸಲಾಗಿರುವ 686 ಚದರ ಕಿ.ಮೀ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ  ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಮಾಸ್ಟರ್‌ ಪ್ಲಾನ್‌ ರೂಪಿಸಲು ಜಿಬಿಎ ನಿರ್ಧರಿಸಿದೆ. ಇದಕ್ಕಾಗಿ ಅರ್ಹ ಸಂಸ್ಥೆಗಳಿಂದ ಟೆಂಡರ್‌ ಆಹ್ವಾನಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸ್ಥಳೀಯ ಯೋಜನಾ ಪ್ರದೇಶದ ಪರಿಷ್ಕೃತ ಮಾಸ್ಟರ್ ಪ್ಲಾನ್ – 2041 (ಆರ್‌ಎಂಪಿ–2041) ಸಿದ್ದಪಡಿಸಲು 2025ರ ಆಗಸ್ಟ್‌ನಲ್ಲಿ ಜಾಗತಿಕ ಟೆಂಡರ್‌ ಕರೆದಿತ್ತು. ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಅಸ್ತಿತ್ವ ಕಳೆದು ಕೊಂಡು ಜಿಬಿಎ ರಚನೆಯಾದ ಬಳಿಕ, ಅದಕ್ಕೆ ಸ್ಥಳೀಯ ಯೋಜನಾ ಪ್ರಾಧಿಕಾರದ ಮಾನ್ಯತೆ ನೀಡಿ, ಬಿಡಿಎ ಅಧಿಕಾರವನ್ನು ಹಸ್ತಾಂತರಿಸಲಾಗಿತ್ತು.

ADVERTISEMENT

ಮೂರು ತಿಂಗಳಾದ ಮೇಲೆ ಜಿಬಿಎ ಮಾಸ್ಟರ್‌ ಪ್ಲಾನ್ ತಯಾರಿಸುವ ಯೋಜನೆಗೆ ಚಾಲನೆ ನೀಡಿದೆ. ವಸತಿ, ವಾಣಿಜ್ಯ, ಕೈಗಾರಿಕೆ, ಕೃಷಿ, ಮನರಂಜನೆ, ಶಿಕ್ಷಣ ಹಾಗೂ ಇತರೆ ಅಗತ್ಯಗಳಿಗೆ ವಲಯ ನಿಯಮಗಳೊಂದಿಗೆ ಜಮೀನನ್ನು ನಿಗದಿಪಡಿಸುವ ಪ್ರಮುಖ ಉದ್ದೇಶವನ್ನು ಮಾಸ್ಟರ್‌ ಪ್ಲಾನ್‌ ಹೊಂದಿದೆ.

ಜನರಿಗೆ ಅಗತ್ಯವಿರುವ ಸಂಪೂರ್ಣ ರಸ್ತೆ ಮಾದರಿ, ಪ್ರಮುಖ ಹಾಗೂ ಮುಖ್ಯ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ವಾಹನ ಸಂಚಾರದ ರಚನೆ, ಪಾದಚಾರಿಗಳಿಗೆ ಅತ್ಯಧಿಕ ಗುಣಮಟ್ಟದ ಸೌಲಭ್ಯ, ಸಾರ್ವಜನಿಕ ಸಾರಿಗೆಗೆ ಮೂಲಸೌಕರ್ಯ ಸೇರಿದಂತೆ ಸಂಚಾರಯುಕ್ತ ನಗರವನ್ನಾಗಿಸುವ ಯೋಜನೆ ಇರಬೇಕು.

ಉದ್ಯಾನ, ಮೈದಾನ, ಸಾರ್ವಜನಿಕ ಬಳಕೆಯ ತೆರೆದ ಪ್ರದೇಶ, ಸಾರ್ವಜನಿಕ ಕಟ್ಟಡಗಳು ಹಾಗೂ ಹೊಸ ಕಟ್ಟಡಗಳ ಅಭಿವೃದ್ಧಿಯ ಕೇಂದ್ರೀಕೃತವಾಗಿರಲಿದೆ ‘ಮಾಸ್ಟರ್ ಪ್ಲಾನ್‌’. ಕೇಂದ್ರ, ರಾಜ್ಯ ಸರ್ಕಾರ ಬಳಸುವ ಜಮೀನುಗಳನ್ನು ಮೀಸಲಾಗಿರಿಸುವುದು, ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ನಿಯಂತ್ರಿಸುವುದು, ಕಟ್ಟಡಗಳ ಎತ್ತರವನ್ನು ನಿರ್ಬಂಧಿಸುವುದು ಸೇರಿದಂತೆ ಪಾರಂಪರಿಕ ಪ್ರದೇಶ, ಕಟ್ಟಡಗಳನ್ನು ‘ಮಾಸ್ಟರ್‌ ಪ್ಲಾನ್‌’ನಲ್ಲಿ ಗುರುತಿಸಲು ಯೋಜಿಸಲಾಗಿದೆ ಎಂದು ಜಿಬಿಎ ನಗರ ಯೋಜನೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

1970; ಬೆಂಗಳೂರು ನಗರ ಯೋಜನಾ ಪ್ರಾಧಿಕಾರದಿಂದ ‘ಔಟ್‌ಲೈನ್‌ ಡೆವಲಪ್‌ಮೆಂಟ್‌ ಪ್ಲಾನ್‌’ (ಒಡಿಪಿ)

1976; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)

2007; ಬಿಡಿಎಯಿಂದ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ (ಆರ್‌ಎಂಪಿ– 2015)

2017; ಬಿಡಿಎಯಿಂದ ಕರಡು ಮಾಸ್ಟರ್‌ ಪ್ಲಾನ್‌–2031

==

1,227.48 ಚದರ ಕಿ.ಮೀ; ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶ

686.82 ಚದರ ಕಿ.ಮೀ; ಗ್ರೇಟರ್‌ ಬೆಂಗಳೂರು ಪ್ರದೇಶ ಸ್ಥಳೀಯ ಪ್ರದೇಶ

540.66 ಚದರ ಕಿಮೀ ಜಿಬಿಎಗೆ?

ಗ್ರೇಟರ್‌ ಬೆಂಗಳೂರು ಪ್ರದೇಶದ ಸುತ್ತಮುತ್ತ 540.66 ಚದರ ಕಿಲೋ ಮೀಟರ್‌ನಲ್ಲಿ ಹಲವು ಸ್ಥಳೀಯ ಯೋಜನಾ ಪ್ರಾಧಿಕಾರಗಳಿದ್ದು, ಇವುಗಳು ಮುಂದಿನ ದಿನದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಸೇರಿಕೊಳ್ಳಲಿವೆ.

ಚುನಾಯಿತ ಪ್ರತಿನಿಧಿಗಳಿರುವ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯದ ಹಂತದಲ್ಲಿದ್ದು, ಅದಾದ ನಂತರ ಆಡಳಿತಾಧಿಕಾರಿಯನ್ನು ನೇಮಿಸಿ ಜಿಬಿಎಗೆ ಸೇರಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ಮಾದನಾಯಕನಹಳ್ಳಿ ನಗರಸಭೆ, ಹೆಬ್ಬಗೋಡಿ ನಗರಸಭೆ, ಹುಣಸಮಾರನಹಳ್ಳಿ ಪಟ್ಟಣ ಪಂಚಾಯಿತಿ, ಚಿಕ್ಕಬಾಣಾವರ ಪಟ್ಟಣ ಪಂಚಾಯಿತಿ, ಕೋನಪ್ಪನ ಅಗ್ರಹಾರ ಪಟ್ಟಣ ಪಂಚಾಯಿತಿ, ದೊಡ್ಡತೋಗೂರು ಪಟ್ಟಣ ಪಂಚಾಯಿತಿ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕೆ ಟೌನ್‌ಶಿಪ್‌ ಪ್ರಾಧಿಕಾರ (ಇಎಲ್‌ಸಿಐಟಿಎ) ಸೇರಿ ಒಟ್ಟಾರೆ 540.66 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ. ಇವುಗಳು ಮುಂದಿನ ದಿನಗಳಲ್ಲಿ ಜಿಬಿಎ ವ್ಯಾಪ್ತಿಗೆ ಸೇರಿಕೊಂಡರೆ ಒಟ್ಟಾರೆ ಪ್ರದೇಶ 1,200 ಚದರ ಕಿ.ಮೀ ಮೀರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.