ADVERTISEMENT

Greater Bengaluru: ‘ಬೆಂಗಳೂರು ಸಿಟಿ ದಿಶಾಂಕ್’ ಆ್ಯಪ್‌ ಬಿಡುಗಡೆ

ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ವಿವಿಧ ಆಯುಕ್ತರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 0:25 IST
Last Updated 26 ಸೆಪ್ಟೆಂಬರ್ 2025, 0:25 IST
<div class="paragraphs"><p>ಬೆಂಗಳೂರು ಸಿಟಿ ದಿಶಾಂಕ್ ಆ್ಯಪ್‌</p></div>

ಬೆಂಗಳೂರು ಸಿಟಿ ದಿಶಾಂಕ್ ಆ್ಯಪ್‌

   

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ತಿಳಿಯಲು ಮೊಬೈಲ್‌ ತಂತ್ರಾಂಶ ‘ಬೆಂಗಳೂರು ಸಿಟಿ ದಿಶಾಂಕ್’ ಬಿಡುಗಡೆ ಮಾಡಲಾಗಿದೆ.

ಇದು ಜಿಐಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಜಿಬಿಎ, 5 ನಗರ ಪಾಲಿಕೆಗಳು, ವಲಯ, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್‌ಗಳ (ಹಳೆಯ 198 ವಾರ್ಡ್‌) ಅಧಿಕೃತ ಗಡಿಗಳನ್ನು ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರಗಳಿರುವ ಜಿಐಎಸ್ ಮಾಹಿತಿ ಸೇರಿಸಲಾಗುವುದು ಎಂದು ಜಿಬಿಎ ಮಾಹಿತಿ ತಂತ್ರಜ್ಞಾನ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ADVERTISEMENT

ರಿಚರ್ಡ್ಸ್ ಟೌನ್ ಪಾರ್ಕ್ ಸಮಸ್ಯೆ: ರಿಚರ್ಡ್ಸ್ ಟೌನ್ ಪಾರ್ಕ್ ಮತ್ತು ಸುತ್ತಲಿನ ಸಮಸ್ಯೆಗಳನ್ನು ಸ್ಥಳೀಯ ನಿವಾಸಿಗಳು ಗುರುವಾರ ಆಯುಕ್ತರ ಮುಂದೆ ತೆರೆದಿಟ್ಟರು.

ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜನರು ಸಮಸ್ಯೆಗಳ ಬಗ್ಗೆ ವಿವರ ನೀಡಿದರು.

ಪಾರ್ಕ್‌ನಲ್ಲಿರುವ ನಡೆಯುವ ದಾರಿಗಳನ್ನು ದುರಸ್ತಿಪಡಿಸಬೇಕು. ಜಿಮ್ ಸಾಧನಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಪಾದಚಾರಿ ರಸ್ತೆ ಕಾಮಗಾರಿ ನಡೆಸಬೇಕು. ಮಾರಾಟ ವಲಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಡೇವಿಸ್ ರಸ್ತೆ, ಕ್ಲಾಕ್‌ ರಸ್ತೆ, ಹಾಲ್ ರಸ್ತೆ, ವಿವಿಯಾನಿ ರಸ್ತೆ, ಹೆಯ್ನ್ಸ್ ರಸ್ತೆ, ಕೋಲ್ಸ್ ರಸ್ತೆ ಮತ್ತು ಆಸಾಯೆ ರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಮತ್ತು ಪಾದಚಾರಿ ಮಾರ್ಗದ ಕಾಮಗಾರಿಗಳನ್ನು ಆಯುಕ್ತರು ಪರಿಶೀಲಿಸಿದರು. ಲಿಂಗರಾಜಪುರ ಮುಖ್ಯರಸ್ತೆ ಮತ್ತು ಲೆಜರ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ವೀಕ್ಷಿಸಿದರು.

ಆರೋಗ್ಯ ಕೇಂದ್ರಕ್ಕೆ ಭೇಟಿ: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಕೆ.ವಿ. ಅವರು ಮಹಾಲಕ್ಷ್ಮಿಪುರದಲ್ಲಿರುವ ಡಯಾಲಿಸಿಸ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದರು.

ಸೇವೆಗಳ ಗುಣಮಟ್ಟ, ಉಪಕರಣಗಳ ಕಾರ್ಯಕ್ಷಮತೆ ಮತ್ತು ರೋಗಿಗಳ ಸೌಕರ್ಯಗಳನ್ನು ವಿಶೇಷವಾಗಿ ಪರಿಶೀಲಿಸಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಅಗತ್ಯ ಸೂಚನೆಯನ್ನು ‌ನೀಡಿದರು.

ನಾಗಪುರ, ಮಹಾಲಕ್ಷ್ಮಿಪುರ ವಿಭಾಗದಲ್ಲಿ, ಶಂಕರಮಠ ವೃತ್ತದಿಂದ ಗೆಳೆಯರ ಬಳಗದ ಕಡೆಗೆ ಸಾಗುವ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಪರಿಶೀಲಿಸಿದರು. ಹೇರೋಹಳ್ಳಿ ಉಪವಿಭಾಗದ ಕೆಂಗೇರಿ - ಮುದ್ದಿನಪಾಳ್ಯ ಮುಖ್ಯ ರಸ್ತೆ, ರಾಜಾಜಿನಗರ - ತಿಮ್ಮಯ್ಯ ರಸ್ತೆ, ಬಂಡೆಮಠ, ಕೆಂಗೇರಿ ಉಪನಗರದ ರಸ್ತೆ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ವ್ಯಾಪ್ತಿಯ ರಸ್ತೆಗಳು, ಹನುಮಂತನಗರದ 50 ಅಡಿ ರಸ್ತೆ, ವಿಜಯನಗರ ವಿಭಾಗದ ಸ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರದ ರಸ್ತೆಗಳನ್ನು ಪರಿಶೀಲಿಸಲಾಯಿತು.

ಸಾಮೂಹಿಕ ಸ್ವಚ್ಛತೆ: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಸ್ಥಳಗಳಲ್ಲಿ ಗುರುವಾರ ಸಾಮೂಹಿಕ ಸ್ವಚ್ಛತೆ ನಡೆಸಲಾಯಿತು.

ಬೆಂಗಳೂರು ಸಿಟಿ ದಿಶಾಂಕ್ ಆ್ಯಪ್‌

ಪ್ರತಿ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅಹವಾಲುಗಳನ್ನು ನೇರವಾಗಿ ಅಧಿಕಾರಿಗಳಿಗೆ ತಲುಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೆ. 26ರಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ ರಸ್ತೆ ಗುಂಡಿಗಳು ಬೀದಿ ದೀಪ ದುರಸ್ತಿ ಕಸದ ಸಮಸ್ಯೆಗಳು ಅಪಾಯಕರ ಮರ/ಕೊಂಬೆಗಳ ಕತ್ತರಿಸುವಿಕೆ ಸೊಳ್ಳೆ ನಿಯಂತ್ರಣ ಬೀದಿ ನಾಯಿಗಳ ಹಾವಳಿ ಉದ್ಯಾನಗಳ ನಿರ್ವಹಣೆ ಅನಧಿಕೃತ ಬ್ಯಾನರ್ ಪೋಸ್ಟರ್‌ಗಳ ತೆರವು ಪಾದಚಾರಿ ಮಾರ್ಗದ ಒತ್ತುವರಿ ಇ-ಖಾತಾ ಸಂಬಂಧಿತ ಸಮಸ್ಯೆಗಳು ಮತ್ತು ಚರಂಡಿ ಶುದ್ಧೀಕರಣಕ್ಕೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಬಹುದು. ಪ್ರತಿ ದೂರು ಸಹಾಯ 2.0 ಪೋರ್ಟಲ್‌ನಲ್ಲಿ ದಾಖಲಾಗಿ ಸಂಬಂಧಿಸಿದ ಅಧಿಕಾರಿಗೆ ನಿಯೋಜಿಸಲಾಗುವುದು. ನಾಗರಿಕರಿಗೆ ಎಸ್‌ಎಂಎಸ್‌ ಮೂಲಕ ದೂರು ಸ್ವೀಕೃತಿಯ ಮಾಹಿತಿ ಹಾಗೂ ಅಧಿಕಾರಿಯ ವಿವರ ಕಳುಹಿಸಲಾಗುತ್ತದೆ. ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆ: ಮೊಬೈಲ್ ಮತ್ತು ವಾಟ್ಸ್‌ಆ್ಯ‍ಪ್‌ ಸಂಖ್ಯೆ: 9480685705 ಸ್ಥಿರ ದೂರವಾಣಿ: 080-22975936/23636671 ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸಹಾಯ ಆಪ್ ಮೂಲಕವೂ ನೊಂದಾಯಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.