
ಗ್ರೇಟರ್ ಬೆಂಗಳೂರು
ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲು 12 ಮಾರ್ಗಸೂಚಿಗಳನ್ನು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024ರಂತೆ ರಚನೆಯಾಗಿರುವ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಸೆಪ್ಟೆಂಬರ್ 29ರಂದು ಸಮಿತಿ ರಚಿಸಲಾಗಿತ್ತು.
ಜಿಬಿಎ ಮುಖ್ಯ ಆಯುಕ್ತ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರು ಸಮಿತಿಯ ಸದಸ್ಯರಾಗಿದ್ದರು. ಈ ಸಮಿತಿ ಡಿ.12ರಂದು ಸಭೆ ನಡೆಸಿದ್ದು, ವಾರ್ಡ್ ಮೀಸಲಾತಿ ನಿಗದಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅಭಿಪ್ರಾಯಪಟ್ಟಿತು. ಅದರಂತೆ, ಡಿ.19ರಂದು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಮಾರ್ಗಸೂಚಿಗಳು:
* ಕೇಂದ್ರ ಸರ್ಕಾರದ ಜನಗಣತಿ ನಿರ್ದೇಶನಾಲಯವು ಅಧಿಕೃತವಾಗಿ ಪ್ರಕಟಿಸಿರುವ 2011ರ ಜನಗಣತಿಯ ಮಾಹಿತಿಯನ್ನು ಪರಿಗಣಿಸಬೇಕು
* ಪರಿಶಿಷ್ಟ ಜಾತಿ/ ಪಂಗಡದವರಿಗೆ ಮೀಸಲಿರಿಸುವ ಸ್ಥಾನಗಳ ಸಂಖ್ಯೆಯನ್ನು ಆಯಾ ನಗರ ಪಾಲಿಕೆಯ ಒಟ್ಟು ಜನಸಂಖ್ಯೆಗೆ ಅನುಸಾರವಾಗಿ ಹಾಗೂ ಒಟ್ಟು ವಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಬೇಕು
* ಒಟ್ಟು ವಾರ್ಡ್‌ಗಳ ಸಂಖ್ಯೆಯಲ್ಲಿ ಮೂರನೇ ಒಂದರಷ್ಟು ವಾರ್ಡ್‌ಗಳ ಮೀಸಲಾತಿಯನ್ನು ಹಿಂದುಳಿತ ವರ್ಗಗಳಿಗೆ ನಿಗದಿಪಡಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿ ಪ್ರಮಾಣ ಶೇ 50ರಷ್ಟನ್ನು ಮೀರುವಂತಿಲ್ಲ.
* ಎಸ್‌ಸಿ, ಎಸ್‌ಟಿ ಮೀಸಲು ಸ್ಥಾನ ನಿಗದಿಪಡಿಸುವಾಗ ವಾರ್ಡ್‌ಗಳಲ್ಲಿ ಆಯಾ ಪ್ರವರ್ಗದಲ್ಲಿ ಇಳಿಮುಖವಾಗುವ ಜನಸಂಖ್ಯೆಯನ್ನು ಪರಿಗಣಿಸಬೇಕು
* ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡ್ ಅನ್ನು ನಿಗದಿಪಡಿಸಿ ಬಳಿಕ, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡ್ ಅನ್ನು ನಿಗದಿಪಡಿಸಬೇಕು.
* ಎಸ್‌ಸಿ, ಎಸ್‌ಟಿಗೆ ಮೀಸಲಾದ ಸ್ಥಾನಗಳಲ್ಲಿ ಶೇ 50ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಿರಬೇಕು.
* ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಮತ್ತು ಮಹಿಳಾ ಮೀಸಲಾತಿ ಹಾಗೂ ಸಾಮಾನ್ಯ ಸ್ಥಾನಗಳ ಪ್ರಮಾಣ ಆಯಾ ನಗರ ಪಾಲಿಕೆ ಮಟ್ಟದಲ್ಲಿ ಕಾಯ್ದುಕೊಳ್ಳಬೇಕು
* ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದ ಸ್ಥಾನಗಳಲ್ಲಿ ಶೇ 80ರಷ್ಟನ್ನು ಪ್ರವರ್ಗ–ಎ ಮತ್ತು ಶೇ 20ರಷ್ಟನ್ನು ಪ್ರವರ್ಗ– ಬಿ ಅಭ್ಯರ್ಥಿಗಳಿಗೆ ಮೀಸಲಿರಿಸಬೇಕು.
* ಹಿಂದುಳಿದ ಪ್ರವರ್ಗ ಎ ಮತ್ತು ಪ್ರವರ್ಗ ಬಿಗಳಲ್ಲಿ ಶೇ 50ರಷ್ಟನ್ನು ಮಹಿಳೆಯರಿಗೆ ಮೀಸಲಿರಿಸಬೇಕು.
* ಆಯಾ ನಗರ ಪಾಲಿಕೆಯಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ಪ್ರವರ್ಗ ಎ ಮತ್ತು ಪ್ರವರ್ಗ ಬಿಗಳಿಗೆ ಹಂಚಿಕೆ ಮಾಡಿ, ಉಳಿದ ಸ್ಥಾನಗಳನ್ನು ಸಾಮಾನ್ಯ ಎಂದು ವರ್ಗೀಕರಿಸಬೇಕು
* ಸಾಮಾನ್ಯ ಸ್ಥಾನಗಳಲ್ಲಿ ಶೇ 50ರಷ್ಟನ್ನು ಮಹಿಳೆಯರಿಗೆ ಮೀಸಲಿರಿಸಬೇಕು
* ಮೀಸಲಿರಿಸಿದ ಸ್ಥಾನಗಳನ್ನು ಪುನರಾವರ್ತನೆಯಾಗದಂತೆ ನಗರ ಪಾಲಿಕೆಯ ಬೇರೆ ಬೇರೆ ವಾರ್ಡ್‌ಗಳಿಗೆ ಸರದಿ ಮೂಲಕ ಮೀಸಲಾತಿಯನ್ನು ಹಂಚಿಕೆ ಮಾಡಬೇಕು. ಸಾಮಾನ್ಯ ಸ್ಥಾನಗಳಿಗೆ ಪುನರಾವರ್ತನೆ ಪರಿಗಣಿಸುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.