ಬೆಂಗಳೂರು: ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಂಗಳೂರನ್ನು ಹಸಿರಾಗಿಸುವ ಪ್ರಯತ್ನ ನಿರಂತರವಾಗಿದೆ. ಈಗ ಅದಕ್ಕೆ ಬೆಂಬಲವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ‘ನಗರ ತೋಟಗಾರಿಕೆ’ ಮೂಲಕ ನಗರದ ಮನೆ ಮನೆಯಲ್ಲಿ ಹಸಿರು ಬೆಳೆಸಲು ನಾಗರಿಕರನ್ನು ಅಣಿಗೊಳಿಸುವ ಕೆಲಸಕ್ಕೆ ಮುಂದಾಗಿದೆ.
ಮನೆ ಅಂಗಳದಲ್ಲಿ, ತಾರಸಿಯಲ್ಲಿ, ಖಾಲಿ ನಿವೇಶನಗಳಲ್ಲಿ ಕೈ ತೋಟಗಳ ನಿರ್ಮಾಣಕ್ಕಾಗಿ ಕೃಷಿ ವಿಶ್ವವಿದ್ಯಾಲಯ ಎರಡು ದಿನಗಳ ಅಲ್ಪಾವಧಿ ಕೋರ್ಸ್(ತರಬೇತಿ) ಆರಂಭಿಸಿದೆ. ಇದರ ಭಾಗವಾಗಿ ಕಳೆದ ತಿಂಗಳು ಕಾರ್ಯಾಗಾರವನ್ನು ಆಯೋಜಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಈ ಕಾರಣದಿಂದ ಕೃಷಿ ವಿಶ್ವವಿದ್ಯಾಲಯ ವರ್ಷಕ್ಕೊಮ್ಮೆ ಆಯೋಜಿಸುತ್ತಿದ್ದ ‘ನಗರ ತೋಟಗಾರಿಕೆ‘ ತರಬೇತಿಯನ್ನು ಈಗ ತಿಂಗಳಿಗೊಮ್ಮೆ ಆಯೋಜಿಸಲು ಯೋಜನೆ ರೂಪಿಸಿದೆ.
ನಗರ ನಿವಾಸಿಗಳು ಇರುವಷ್ಟೇ ಜಾಗದಲ್ಲಿ ಮನೆಗಾಗುವಷ್ಟು ತರಕಾರಿ, ಹಣ್ಣು, ಹೂವು ಬೆಳೆದುಕೊಳ್ಳಲು ಆರಂಭಿಸಿದರೆ, ನಗರದ ಮನೆ ಮನೆಯೂ ಹಸಿರಾಗುತ್ತದೆ. ಹಸಿರು ಬೆಳೆಸಿದವರಿಗೆ ಪೌಷ್ಟಿಕ ಆಹಾರವೂ ಲಭ್ಯವಾಗುತ್ತದೆ. ಹೀಗಾಗಿ, ಕೃಷಿ ವಿಶ್ವವಿದ್ಯಾಲಯದ ‘ನಗರ ತೋಟಗಾರಿಕೆ’ ಪರಿಕಲ್ಪನೆಯ ಹಿಂದೆ ಬೆಂಗಳೂರನ್ನು ಹಸಿರಾಗಿಸುವ ಜತೆಗೆ ನಗರವಾಸಿಗಳ ಆರೋಗ್ಯದ ಕಾಳಜಿಯೂ ಇದೆ.
ಮನೆಯಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಗೊಬ್ಬರವಾಗಿಸುವುದು, ಬೀಜದಿಂದ ಗಿಡ ಬೆಳೆಸುವುದು, ಗೊಬ್ಬರ ಬೆರೆಸಿ ಮಣ್ಣನ್ನು ಹದಗೊಳಿಸುವುದು, ಕುಂಡಗಳಲ್ಲಿ ಗಿಡಗಳನ್ನು ನೆಟ್ಟು ಆರೈಕೆ ಮಾಡುವುದು, ತಾರಸಿ ತೋಟ, ಲಂಬ ತೋಟಗಾರಿಕೆ (ವರ್ಟಿಕಲ್ ಗಾರ್ಡನಿಂಗ್), ಒಳಾಂಗಣ ಸಸ್ಯಗಳನ್ನು ಬೆಳೆಸುವುದು, ಸಸ್ಯ ರೋಗಗಳು/ಕೀಟ ಬಾಧೆ ನಿರ್ವಹಣೆಯ ಸಾಮಾನ್ಯ ಅಂಶಗಳ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ್ ಅವರು ಕಲಿಕಾ ವಿಧಾನವನ್ನು ವಿವರಿಸಿದರು.
‘ತರಬೇತಿಯಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗುತ್ತದೆ. ತರಬೇತಿಯಲ್ಲಿ ಪಾಲ್ಗೊಂಡವರು ತರಬೇತಿ ನಂತರವೂ ವಿಶ್ವವಿದ್ಯಾಲಯದ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯಬಹುದು. ತರಬೇತಿಯಲ್ಲಿ ಭಾಗವಹಿಸುವವರಿಗೆ ಹಣ್ಣು, ತರಕಾರಿ, ಹೂವಿನ ಬೀಜಗಳು, ಕೈತೋಟ ಕುರಿತ ಮಾಹಿತಿ ಪತ್ರವನ್ನೊಳಗೊಂಡ ಕಿಟ್ ನೀಡಲಾಗುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ತಜ್ಞರು ಮಾಹಿತಿ ನೀಡಿದರು.
‘ಕಡಿಮೆ ಜಾಗ ಇದೆ, ತೋಟ ಮಾಡುವುದು ಹೇಗೆ’ ಎಂದು ಚಿಂತಿಸುತ್ತಿರುವವರು, ‘ಮನೆಯೊಳಗೆ ಎಂಥಹ ಅಲಂಕಾರಿಕ ಸಸ್ಯಗಳನ್ನು ಬೆಳೆಸಬೇಕು’ ಎಂದು ಯೋಚಿಸುತ್ತಿರುವವರು, ಅಪಾರ್ಟ್‌ಮೆಂಟ್‌ಗಳಲ್ಲಿರುವ ತೆರೆದ ಸ್ಥಳಗಳಲ್ಲಿ ತೋಟ ಮಾಡಲು ಬಯಸುವವರು.. ಒಟ್ಟಾರೆ, ಕೈತೋಟ ಮಾಡಲು ಉತ್ಸಾಹ, ಆಸಕ್ತಿ ಇರುವ ಎಲ್ಲ ‘ಹಸಿರು ಪ್ರೀತಿಯ’ ಮನಸ್ಸಿನವರೂ ನಗರ ತೋಟಗಾರಿಕೆ ತರಬೇತಿಯಲ್ಲಿ ಭಾಗವಹಿಸಬಹುದು.
‘ಎರಡು ದಿನಗಳ ತರಬೇತಿಗೆ ₹1,770 ಶುಲ್ಕ ನಿಗದಿಪಡಿಸಿದೆ. ಈ ಶುಲ್ಕದಲ್ಲಿ ಊಟ, ಟೀ, ಲಘು ಉಪಹಾರದ ಜೊತೆಗೆ, ಮಾಹಿತಿ ಪತ್ರವನ್ನೊಳಗೊಂಡ ಕಿಟ್ ಕೂಡ ಸೇರುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದರು.
‘ನಗರ ತೋಟಗಾರಿಕೆ’ಯಿಂದ ಹಣ್ಣು ತರಕಾರಿಗಳನ್ನು ಬೆಳೆಯುವ ಜೊತೆಗೆ ಬೆಂಗಳೂರನ್ನು ಸ್ವಚ್ಛವಾಗಿಸುವ ಹಸಿರಾಗಿಸುವ ಪ್ರಯತ್ನಗಳಿಗೂ ಕೈ ಜೋಡಿಸಬಹುದು’ ಎನ್ನುತ್ತಾರೆ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್. ‘ನಗರದಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಮನೆಯಲ್ಲೇ ಒಣ–ಹಸಿ ಕಸ ಬೇರ್ಪಡಿಸಿ ಕಾಂಪೋಸ್ಟ್ ಮಾಡಿ ಗಿಡಗಳಿಗೆ ಬಳಸಿದರೆ ಬಿಬಿಎಂಪಿ ಮೇಲಿನ ಹೊರೆ ತುಸು ಕಡಿಮೆಯಾಗುತ್ತದೆ. ಇದು ‘ಸ್ವಚ್ಛ ಬೆಂಗಳೂರು’ ಪ್ರಯತ್ನಕ್ಕೆ ಸಣ್ಣದೊಂದು ಕೊಡುಗೆಯಾಗುತ್ತದೆ’ ಎಂದು ಅವರು ವಿವರಿಸಿದರು. ‘ನಗರ ಪ್ರದೇಶದ ಅನೇಕ ಮಕ್ಕಳಿಗೆ ತಾವು ಉಣ್ಣುವ ಆಹಾರ ಎಲ್ಲಿಂದ ಬರುತ್ತದೆ ಎಂದು ಗೊತ್ತಿರುವುದಿಲ್ಲ. ತರಗತಿಗಳಲ್ಲಿ ಪಠ್ಯದ ಮೂಲಕ ಮಾಹಿತಿ ಪಡೆದಿರಬಹುದೇ ಹೊರತು ಪ್ರಾಯೋಗಿಕ ಮಾಹಿತಿ ಕಡಿಮೆ. ಮನೆಯಲ್ಲಿ ಕೈತೋಟ ಬೆಳೆಸುವುದರಿಂದ ಮಕ್ಕಳಿಗೆ ಸಸ್ಯ ಪ್ರಪಂಚದ ಜೊತೆಗೆ ಕೃಷಿಯ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಬಹುದು’ ಎನ್ನುತ್ತಾರೆ ಅವರು.
ಪ್ರತಿ ವರ್ಷ ಕೃಷಿ ಮೇಳಕ್ಕೆ ಹೆಚ್ಚು ನಗರವಾಸಿಗಳು ಭೇಟಿ ನೀಡುತ್ತಿದ್ದು ಕೈತೋಟ ನಿರ್ಮಾಣ ಕುರಿತು ಆಸಕ್ತಿ ತೋರುತ್ತಿದ್ದರು. ನಮ್ಮ ತಜ್ಞರು ಅವರಿಗೆ ನಗರ ತೋಟಗಾರಿಕೆ ಪರಿಕಲ್ಪನೆ ಪರಿಚಯಿಸುತ್ತಿದ್ದರು. ಈಗ ಅದನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ.
-ಎಸ್.ವಿ.ಸುರೇಶ್ ಕುಲಪತಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.