ADVERTISEMENT

ಫ್ಲೆಕ್ಸ್‌ ನಿಷೇಧ ಅರ್ಜಿ ವಿಚಾರಣೆಗೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:19 IST
Last Updated 30 ಅಕ್ಟೋಬರ್ 2018, 20:19 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್‌ ಸೇರಿದಂತೆ ಎಲ್ಲ ಬಗೆಯ ಜಾಹೀರಾತುಗಳನ್ನು ಒಂದು ವರ್ಷಗಳ ಅವಧಿಗೆ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ
ಆದೇಶಿಸಿದೆ.

ಈ ಕುರಿತ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ‘ಏಕಸದಸ್ಯ ನ್ಯಾಯಪೀಠ ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಬಹುದು’ ಎಂದು ಆದೇಶಿಸಿತು.

‘ಜಾಹೀರಾತು ಕುರಿತಾದ ಅರ್ಜಿಗಳ ಬಗ್ಗೆ ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ’ ಎಂದು ಏಕಸದಸ್ಯ ನ್ಯಾಯಪೀಠ ಹೇಳಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ADVERTISEMENT

ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರು.

ಒಂದು ವರ್ಷದ ಮಟ್ಟಿಗೆ ಬೆಂಗಳೂರು ನಗರದಲ್ಲಿ ಎಲ್ಲ ಬಗೆಯ ಜಾಹೀರಾತುಗಳನ್ನು ನಿಷೇಧಿಸಿ ಬಿಬಿಎಂಪಿ 2018ರ ಆಗಸ್ಟ್‌ 6ರಂದು ಬಿಬಿಎಂಪಿ ನಿರ್ಧಾರ ಕೈಗೊಂಡಿದೆ. ಇದನ್ನು ಅರ್ಜಿದಾರರು ಏಕಸದಸ್ಯ ನ್ಯಾಯಪೀಠದಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.