
ಬೆಂಗಳೂರು: ‘ಹಸಿರು ಹೆಜ್ಜೆ ಸ್ವಚ್ಛ ಉಸಿರು’ ಸಂಘಟನೆಯು ಕುಂಬಳಗೋಡು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಜನವರಿ 17ರಂದು ಹಸಿರು ಹಬ್ಬ ಹಮ್ಮಿಕೊಂಡಿದೆ.
ಅಂಚೆಪಾಳ್ಯ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ ಉದ್ಘಾಟಿಸುವರು. ತ್ಯಾಜ್ಯ ನಿರ್ವಹಣೆ, ಹಸಿ ಕಸ, ಒಣ ಕಸ ವಿಂಗಡಣೆ, ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು ಮತ್ತು ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ಬಿಸಾಡದಂತೆ ಜಾಗೃತಿ ಮೂಡಿಸಲಾಗುವುದು.
ಅಂಚೆ ಪಾಳ್ಯ ಸರ್ಕಾರಿ ಶಾಲೆ, ಉರ್ದು ಶಾಲೆ, ಗೋಪಾಲನ್ ಶಾಲೆಯ ಮಕ್ಕಳು ಮೆರವಣಿಗೆ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರ ಕುರಿತು ಜಾಗೃತಿ ಮೂಡಿಸುವರು. ಆರೋಗ್ಯ ತಪಾಸಣಾ ಶಿಬಿರ, ಕರಕುಶಲ ವಸ್ತುಗಳು, ಮಕ್ಕಳ ಚಿತ್ರಕಲೆ ಪ್ರದರ್ಶನ ಸೇರಿ 15 ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತದೆ. ಅಂಚೆಪಾಳ್ಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತ್ಯಾಜ್ಯದಿಂದ ತಯಾರಿಸಿದ ಆಟಿಕೆಗಳನ್ನು ಪ್ರದರ್ಶಿಸಲಿದ್ದಾರೆ.
‘ಹಸಿರು ಹೆಜ್ಜೆ ಸ್ವಚ್ಛ ಉಸಿರು’ ಸದಸ್ಯೆ ಶ್ರೀದೇವಿ ಗುಟ್ಟು ಮಾತನಾಡಿ, ‘ಹಸಿರು ಹಬ್ಬದ ಮೊದಲ ಆವೃತ್ತಿಯ ಕಾರ್ಯಕ್ರಮವನ್ನು ಕಾತುರದಿಂದ ಎದುರು ನೋಡುತ್ತಿದ್ದೇವೆ. ಕುಂಬಳಗೋಡು ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಹಸಿರು ತಾಣವಾಗಿಸಲು ಇದು ಉತ್ತಮ ಅವಕಾಶ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.