ADVERTISEMENT

ಯಲಹಂಕ: ವೆಂಕಟಾಲದಲ್ಲಿ ಕಡಲೆಕಾಯಿ ಪರಿಷೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 18:44 IST
Last Updated 9 ನವೆಂಬರ್ 2025, 18:44 IST
ವೆಂಕಟಾಲದಲ್ಲಿರುವ ಅಭಯ ಮಹಾಗಣಪತಿ ದೇವಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಡಲೇಕಾಯಿ ಪರಿಷೆಯ ದೃಶ್ಯ
ವೆಂಕಟಾಲದಲ್ಲಿರುವ ಅಭಯ ಮಹಾಗಣಪತಿ ದೇವಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಡಲೇಕಾಯಿ ಪರಿಷೆಯ ದೃಶ್ಯ   

ಯಲಹಂಕ: ವೆಂಕಟಾಲದಲ್ಲಿರುವ ಅಭಯ ಮಹಾಗಣಪತಿ ದೇವಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎರಡು ದಿನಗಳ ಕಡಲೆಕಾಯಿ ಪರಿಷೆ ಸಡಗರದಿಂದ ನಡೆಯಿತು.

ಚಿಕ್ಕಬಳ್ಳಾಪುರ, ದೇವನಹಳ್ಳಿ, ತುಮಕೂರು, ಜಾವಗಲ್‌, ಕದಿರಿ, ದೊಡ್ಡಬಳ್ಳಾಪುರ, ವಿಜಯಪುರ ಸೇರಿದಂತೆ ಸ್ಥಳೀಯ ಕಡಲೆಕಾಯಿ ವ್ಯಾಪಾರಿಗಳು ಪರಿಷೆಯಲ್ಲಿ ಪಾಲ್ಗೊಂಡು, ನಾಟಿ, ಕಾಬೂಲ್‌, ಸಾಮ್ರಾಟ್‌ ಮತ್ತಿತರ ತಳಿಯ ಹಸಿ, ಹುರಿದ ಮತ್ತು ಬೇಯಿಸಿದ ಕಡಲೆಕಾಯಿಯನ್ನು ಮಾರಾಟ ಮಾಡಿದರು.

ಗ್ರಾಹಕರು ಉತ್ಸಾಹದಿಂದ ತಮಗಿಷ್ಟವಾದ ಕಡಲೆಕಾಯಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಪರಿಷೆಯಲ್ಲಿ ಕಡಲೆಕಾಯಿಯನ್ನು ರಾಶಿಹಾಕಿ ವ್ಯಾಪಾರ ಮಾಡುವ ಪ್ರತಿಯೊಬ್ಬರಿಗೂ ₹ 500 ಪ್ರೋತ್ಸಾಹಧನದ ಜೊತೆಗೆ ವ್ಯಾಪಾರಿಗಳಿಗೆ ಎರಡು ದಿನ ಕಾಫಿ, ಉಪಾಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿತ್ತು. 

ADVERTISEMENT

ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ‘ಬಹಳ ವರ್ಷಗಳ ಹಿಂದಿನಿಂದಲೂ ಬಸವನಗುಡಿ ಕಡಲೆಕಾಯಿ ಪರಿಷೆ ಪ್ರಖ್ಯಾತಿ ಪಡೆದಿದೆ. ಒತ್ತಡದ ಜೀವನ ಮತ್ತು ಸಂಚಾರ ದಟ್ಟಣೆಯ ನಡುವೆ ಅಲ್ಲಿಗೆ ತೆರಳಿ, ಪರಿಷೆ ವೀಕ್ಷಿಸುವುದು ಅಸಾಧ್ಯ. ವೆಂಕಟಾಲದಲ್ಲಿ ಪರಿಷೆ ಆಯೋಜಿಸಿರುವುದರಿಂದ ಜನರು ಕುಟುಂಬ ಸಮೇತ ಭೇಟಿ ನೀಡಿ, ತಮಗಿಷ್ಟವಾದ ಕಡಲೆಕಾಯಿ ಖರೀದಿಸಲು ಒಳ್ಳೆಯ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಂಪೇಗೌಡ ಮಾತನಾಡಿ, ‘ದಕ್ಷಿಣ ಭಾಗದಂತೆಯೇ ಬೆಂಗಳೂರು ಉತ್ತರ ಭಾಗದಲ್ಲಿ ಪ್ರತಿವರ್ಷ ಪರಿಷೆ ನಡೆಸಲಾಗುತ್ತಿದೆ. ನಿರೀಕ್ಷೆಗೂ ಮೀರಿ ಹಲವು ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಕಡಲೆಕಾಯಿ ವ್ಯಾಪಾರಿಗಳು ಪರಿಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರ ಸ್ಪಂದನೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ’ ಎಂದು ತಿಳಿಸಿದರು.

ಪರಿಷೆಯಲ್ಲಿ ಗೃಹಪಯೋಗಿ ವಸ್ತುಗಳು, ಕೃತಕ ಆಭರಣಗಳು, ಮಕ್ಕಳ ಆಟಿಕೆಗಳು, ಬಟ್ಟೆ, ಪಾದರಕ್ಷೆ, ಮಡಕೆ-ಕುಡಿಕೆಗಳು, ಆಲಂಕಾರಿಕ ವಸ್ತುಗಳು, ತಿಂಡಿ-ತಿನಿಸುಗಳೂ ಸೇರಿ ವೈವಿಧ್ಯಮಯ ವಸ್ತುಗಳ ಮಾರಾಟದ ಭರಾಟೆ ಜೋರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.