ADVERTISEMENT

ಕನ್ನಡ ಹಾಡಿಗೆ ಬೇಡಿಕೆ ಇಟ್ಟವರ ಮೇಲೆ 'ಬದ್ಮಾಷ್' ಪಬ್‌ನಲ್ಲಿ ಹಲ್ಲೆ ನಡಿತಾ?

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:29 IST
Last Updated 6 ಫೆಬ್ರುವರಿ 2022, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋರಮಂಗಲದ ಪಬ್‌ವೊಂದರಲ್ಲಿ ಕನ್ನಡ ಹಾಡಿನ ವಿಚಾರವಾಗಿ ಗಲಾಟೆ ನಡೆದಿದ್ದು, ಯುವತಿ ಹಾಗೂ ಅವರ ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

‘ನಗರದ ನಿವಾಸಿಯಾಗಿರುವ ಯುವತಿಯೊಬ್ಬರು ತಮ್ಮ ಹುಟ್ಟುಹಬ್ಬವಿದ್ದಿದ್ದರಿಂದ ಸಹೋದರ ಹಾಗೂ ಸ್ನೇಹಿತರ ಜೊತೆ ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ 'ಬದ್ಮಾಷ್' ಪಬ್‌ಗೆ ಶನಿವಾರ (ಫೆ. 5) ರಾತ್ರಿ ಹೋಗಿದ್ದರು. ಅದೇ ಸಂದರ್ಭದಲ್ಲೇ ಕನ್ನಡ ಹಾಡಿನ ವಿಚಾರವಾಗಿ ಮಾತಿನ ಚಕಮಕಿ ನಡೆದಿರುವ ಮಾಹಿತಿ ಇದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಬ್‌ನಲ್ಲಿ ಪರಭಾಷೆ ಹಾಡುಗಳನ್ನು ಹಾಕಲಾಗಿತ್ತು. ಅದನ್ನು ಪ್ರಶ್ನಿಸಿದ್ದ ಯುವತಿ, ಕನ್ನಡ ಹಾಡು ಹಾಕುವಂತೆ ಹೇಳಿದ್ದರು. ಅದಕ್ಕೆ ಒಪ್ಪದ ಪಬ್‌ ಸಿಬ್ಬಂದಿ, ಯುವತಿ ಮೇಲೆ ಹರಿಹಾಯ್ದಿದ್ದರು. ಮಧ್ಯಪ್ರವೇಶಿಸಿದ್ದ ಸಹೋದರನ ಮೇಲೂ ಹಲ್ಲೆಗೆ ಯತ್ನಿಸಿದ್ದರೆಂದು ಯುವತಿ ಕಡೆಯವರು ಹೇಳುತ್ತಿದ್ದಾರೆ.’

ADVERTISEMENT

‘ಪಬ್‌ನಲ್ಲಿ ನಡೆದ ವಾಗ್ವಾದ ಹಾಗೂ ಗಲಾಟೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸುಪರ್ದಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿವೆ.

‘ಘಟನೆ ಬಗ್ಗೆ ದೂರು ನೀಡಿದರೂ ಪಬ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂಬುದಾಗಿ ಯುವತಿ ಸ್ನೇಹಿತರು ದೂರಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬದ್ಮಾಷ್ ಪಬ್‌ ವ್ಯವಸ್ಥಾಪಕ ಡೊಮಿನಿಕ್, ‘ನಾವೂ ಕನ್ನಡ ಅಭಿಮಾನಿಗಳು. ಕನ್ನಡ ಹಾಡು ಹಾಕುತ್ತೇವೆ. ಆದರೆ, ಶನಿವಾರ ರಾತ್ರಿ ತಪ್ಪಾಗಿದೆ. ಕ್ಷಮೆ ಕೋರುತ್ತೇನೆ.ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ತಪ್ಪು ಮಾಡಿದ ಪಬ್ಸಿಬ್ಬಂದಿ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.