ADVERTISEMENT

ಕೀಟಗಳ ಹಿಂಡಿನಂತೆ ಗುಂಪು ಗುಂಪಾಗಿ ವೈರಿಯ ಮೇಲೆ ಎರಗುತ್ತವೆ ಈ ಡ್ರೋನ್‌ಗಳು!

ಬಳಕೆಗೆ ಸಿದ್ಧವಾಗಿರುವ ದೇಶೀಯ ಯುದ್ಧ ತಂತ್ರಜ್ಞಾನದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 20:37 IST
Last Updated 24 ಅಕ್ಟೋಬರ್ 2021, 20:37 IST
ಡ್ರೋನ್‌ಗಳು ನಿಗದಿತ ಗುರಿಯನ್ನು ನಾಶಗೊಳಿಸಿದ ಸಾಹಸದ ರೋಚಕ ದೃಶ್ಯ
ಡ್ರೋನ್‌ಗಳು ನಿಗದಿತ ಗುರಿಯನ್ನು ನಾಶಗೊಳಿಸಿದ ಸಾಹಸದ ರೋಚಕ ದೃಶ್ಯ   

ಬೆಂಗಳೂರು: ಕೀಟಗಳ ಹಿಂಡಿನಂತೆ ಡ್ರೋನ್‌ಗಳ ಗುಂಪೊಂದು ಆಗಸಕ್ಕೇರಿ ವೈರಿಯ ಇರುವಿಕೆಯನ್ನು ಗುರುತಿಸಿ ನಾಶಪಡಿಸಬಲ್ಲ ಅತ್ಯಾಧುನಿಕ ದೇಶೀಯ ಯುದ್ಧ ತಂತ್ರಜ್ಞಾನ ಬಳಕೆಗೆ ಸಿದ್ಧವಾಗಿದೆ. ಭಾರತೀಯ ವಾಯುಪಡೆಯ ಯಲಹಂಕ ವಾಯುನೆಲೆ ದೇಶೀಯ ಡ್ರೋನ್‌ ಗುಂಪು ದಾಳಿಯ ಯಶಸ್ವಿ ಪ್ರಯೋಗಕ್ಕೆ ಭಾನುವಾರ ಸಾಕ್ಷಿಯಾಯಿತು.

ವಾಯುಪಡೆ ನಡೆಸಿದ ‘ಮೆಹರ್‌ ಬಾಬಾ ಸ್ವಾರ್ಮ್‌ ಡ್ರೋನ್‌ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದ ತಂಡಗಳು ಇಂತಹ ಅತ್ಯಾಧುನಿಕ ಯುದ್ಧ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಅಂತಿಮ ಸುತ್ತಿನಲ್ಲಿ ವಿಜೇತರಾಗಿರುವ ನಾಲ್ಕು ತಂಡಗಳ ಪೈಕಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ ಮತ್ತು ದಕ್ಷ ಅನ್‌ಮ್ಯಾನ್ಡ್‌ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಜಂಟಿಯಾಗಿ ರೂಪಿಸಿರುವ ಗುಂಪು ದಾಳಿಯ ಡ್ರೋನ್‌ಗಳ ಪ್ರಾಯೋಗಿಕ ಪ್ರದರ್ಶನ ‘ಸ್ವರ್ಣಿಮ ವಿಜಯ ವರ್ಷ’ ಸಮಾರೋಪದ ಬಳಿಕ ನಡೆಯಿತು.

ನಿರ್ದಿಷ್ಟ ಪ್ರದೇಶದ ಕಣ್ಗಾವಲಿಗೆ ಮೊದಲು ಒಂದು ಡ್ರೋನ್‌ ಆಗಸಕ್ಕೇರುತ್ತದೆ. ಅದು ತನ್ನ ಸುತ್ತಲಿನ ಪ್ರದೇಶದ ಮೇಲೆ ಕಣ್ಣು ಹಾಯಿಸಿ, ವೈರಿಯ ಇರುವಿಕೆ ಕುರಿತು ಖಚಿತ ಸಂದೇಶವನ್ನು ಇತರ ಡ್ರೋನ್‌ಗಳ ಗುಂಪಿಗೆ ರವಾನಿಸುತ್ತದೆ. ಕ್ಷಣ ಮಾತ್ರದಲ್ಲೇ ಆರು ದೊಡ್ಡ ಗಾತ್ರದ ‘ಯೋಧ’ ಡ್ರೋನ್‌ಗಳು ಮತ್ತು ನಾಲ್ಕು ಸಣ್ಣ ಗಾತ್ರದ ‘ಘಾತಕ್‌’ ಡ್ರೋನ್‌ಗಳು ಆಗಸಕ್ಕೆ ಚಿಮ್ಮಿದವು.

ADVERTISEMENT

ಕೆಲಕಾಲ ವೈರಿಯ ಸುತ್ತ ಚಲಿಸಿದ ‘ಯೋಧ‘ ಡ್ರೋನ್‌ಗಳು ತಮ್ಮೊಳಗೆ ಅಡಗಿಸಿಕೊಂಡಿದ್ದ ಬಾಂಬ್‌ಗಳನ್ನು ಬೀಳಿಸಿದವು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ವೈರಿಯತ್ತ ನುಗ್ಗಿಬಂದ ಪುಟ್ಟ ‘ಘಾತಕ್‌’ ಡ್ರೋನ್‌ಗಳು ತಮ್ಮನ್ನೇ ಸ್ಫೋಟಿಸಿಕೊಂಡು ವೈರಿಯನ್ನು ಭಸ್ಮಗೊಳಿಸಿದವು. ವೈರಿಗಳ ನೆಲೆ ಎಂಬುದಾಗಿ ಗುರುತಿಸಿದ್ದ ಮೂರು ಗುರಿಗಳನ್ನು ಈ ರೀತಿ ಯಶಸ್ವಿಯಾಗಿ ಸ್ಫೋಟಿಸಲಾಯಿತು.

ಮೂರು ಬಗೆಯ ಡ್ರೋನ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಲಾಗಿದೆ. ಒಂದಕ್ಕೊಂದು ಮಾಹಿತಿ ರವಾನಿಸುತ್ತಾ, ಮುಂದಿನ ಹೆಜ್ಜೆಯ ಕುರಿತು ನಿರ್ದೇಶನ ನೀಡುತ್ತವೆ. ಹಲವು ಡ್ರೋನ್‌ಗಳು ಸಮೀಪದಲ್ಲೇ ಹಾರಾಡುತ್ತಿದ್ದರೂ, ಡಿಕ್ಕಿಯಾಗದಂತೆ ತಡೆಯುವ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಮಾನವ ರಹಿತ ಯುದ್ಧ ತಂತ್ರಜ್ಞಾನವನ್ನು ದೂರದಲ್ಲಿರುವ ನಿಯಂತ್ರಣ ಕೇಂದ್ರದಲ್ಲಿ ಕುಳಿತೇ ಸುಲಭವಾಗಿ ಬಳಸಲು ಸಾಧ್ಯವಾಗುವಂತೆ ರೂಪಿಸಲಾಗಿದೆ.

ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಸೇರಿದಂತೆ ನೂರಾರು ಹಿರಿಯ ಅಧಿಕಾರಿಗಳು ಡ್ರೋನ್‌ ಮೂಲಕ ವೈರಿಯನ್ನು ನಾಶಪಡಿಸುವ ಪ್ರಾಯೋಗಿಕ ದಾಳಿಯನ್ನು ವೀಕ್ಷಿಸಿದರು. ಕೃತಕ ಬುದ್ಧಿಮತ್ತೆಯನ್ನೇ ಆಧರಿಸಿರುವ ಹೊಸ ಯುದ್ಧ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿರುವುದಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಬೇಡಿಕೆ ಆಧರಿಸಿ ಸುಧಾರಣೆ: ‘ಸದ್ಯ ಒಂದು ಕೆ.ಜಿ.ಯಷ್ಟು ಸ್ಫೋಟಕವನ್ನು ಮೇಲಕ್ಕೆ ಸಾಗಿಸಿ ನಿರ್ದಿಷ್ಟ ಗುರಿಯ ಮೇಲೆ ದಾಳಿಮಾಡಬಲ್ಲ ಸಾಮರ್ಥ್ಯವನ್ನು ದಕ್ಷ ತಂಡ ಅಭಿವೃದ್ಧಿಪಡಿಸಿರುವ ಡ್ರೋನ್‌ಗಳು ಹೊಂದಿವೆ. ಮುಂದೆ, ಸೇನೆಯ ಬೇಡಿಕೆಗೆ ತಕ್ಕಂತೆ ಸುಧಾರಣೆ ತರುವ ಉದ್ದೇಶವಿದೆ’ ಎಂದು ಅಣ್ಣಾ– ದಕ್ಷ ತಂಡದಲ್ಲಿರುವ ನಿವೃತ್ತ ವಿಂಗ್‌ ಕಮಾಂಡರ್‌ ಕೆ.ಆರ್‌. ಶ್ರೀಕಾಂತ್‌ ತಿಳಿಸಿದರು.

---

ನಾಲ್ಕು ತಂಡಗಳಿಗೆ ಪ್ರಶಸ್ತಿ

‘ಮೆಹರ್‌ ಬಾಬಾ ಸ್ವಾರ್ಮ್‌ ಡ್ರೋನ್‌ ಸ್ಪರ್ಧೆ’ 2018ರ ಅಕ್ಟೋಬರ್‌ನಲ್ಲಿ ಆರಂಭವಾಗಿತ್ತು. 154 ತಂಡಗಳು ಅರ್ಜಿ ಸಲ್ಲಿಸಿದ್ದು, 57 ತಂಡಗಳು ಮೊದಲ ಸುತ್ತು ಪ್ರವೇಶಿಸಿದ್ದವು. 20 ತಂಡಗಳು ಎರಡನೇ ಸುತ್ತು ಪ್ರವೇಶಿಸಿದ್ದವು. ಗುಂಪು ಡ್ರೋನ್‌ ದಾಳಿಯ ಯಶಸ್ವಿ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ನಾಲ್ಕು ತಂಡಗಳಿಗೆ ವಾಯುಪಡೆಯ ತಜ್ಞರ ಸಮಿತಿ ಬಹುಮಾನ ಘೋಷಿಸಿದೆ.

ಅತ್ಯುತ್ತಮ ಗುಂಪು ವಿನ್ಯಾಸಕ್ಕೆ ಬೆಂಗಳೂರಿನ ನ್ಯೂಸ್ಪೇಸ್‌ ರೀಸರ್ಚ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌, ಅತ್ಯುತ್ತಮ ಸಂವಹನ ವಿನ್ಯಾಸಕ್ಕೆ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಫ್ಲೇರ್‌ ಅನ್‌ಮ್ಯಾನ್ಡ್ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ತಂಡಕ್ಕೆ, ಅತ್ಯುತ್ತಮ ಡ್ರೋನ್‌ ವಿನ್ಯಾಸಕ್ಕೆ ದಕ್ಷ ಅನ್‌ಮ್ಯಾನ್ಡ್‌ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ತಂಡಕ್ಕೆ ಹಾಗೂ ಅತ್ಯುತ್ತಮ ಆವಿಷ್ಕಾರ ವಿನ್ಯಾಸಕ್ಕೆ ನೊಯ್ಡಾದ ವೇದಾ ಡಿಫೆಮ್ಸ್‌ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಪ್ರಥಮ ಸ್ಥಾನ ಲಭಿಸಿದೆ.

ನಾಲ್ಕೂ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ, ‘ಗುಂಪು ಡ್ರೋನ್‌ ತಂತ್ರಜ್ಞಾನ ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಯೋಗದ ಸ್ಪರ್ಧೆಗೆ ವಾಯುಪಡೆಯಿಂದ ಪೂರ್ಣ ಆರ್ಥಿಕ ನೆರವು ನೀಡಲಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಈ ಸ್ಪರ್ಧೆ ನಡೆಸಲಾಗುವುದು’ ಎಂದು ಪ್ರಕಟಿಸಿದರು.

-----

‘ತಂತ್ರಾಂಶದಲ್ಲಿ ಸ್ವಾವಲಂಬನೆ ಸಾಧ್ಯ’

‘ವಿದೇಶಿ ನಿರ್ಮಿತ ಡ್ರೋನ್‌ಗಳನ್ನು ಈಗಲೂ ಸೇನೆಯಲ್ಲಿ ಬಳಸಲಾಗುತ್ತಿದೆ. ಆದರೆ, ವಿದೇಶಗಳು ರಕ್ಷಣಾ ಉದ್ದೇಶದ ಬಳಕೆಯ ತಂತ್ರಜ್ಞಾನವನ್ನು ಪೂರ್ಣವಾಗಿ ಹಂಚಿಕೊಳ್ಳುವುದಿಲ್ಲ. ದೇಶೀಯವಾಗಿ ಅಭಿವೃದ್ಧಿಪಡಿಸುವ ಡ್ರೋನ್‌ಗಳಿಂದ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಸ್ವಾವಲಂಬನೆಯೂ ಸಾಧ್ಯವಾಗಲಿದೆ’ ಎಂದು ನ್ಯೂಸ್ಪೇಸ್‌ ಟೆಕ್ನಾಲಜೀಸ್‌ನ ಮುಖ್ಯಸ್ಥ ಸಮೀರ್‌ ಜೋಶಿ ಹೇಳಿದರು.

ನಾಗರಿಕ ಉದ್ದೇಶ ಮತ್ತು ಮಿಲಿಟರಿ ಉದ್ದೇಶಕ್ಕೆ ಡ್ರೋನ್‌ಗಳ ಬಳಕೆ ಕುರಿತು ಸ್ಪಷ್ಟವಾದ ನೀತಿ ಅಗತ್ಯವಿದೆ. ಇದರಿಂದ ಈ ಉದ್ಯಮ ಬೃಹತ್ತಾಗಿ ಬೆಳೆಯುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆಯ ವಿಚಾರದಲ್ಲಿ ಭಾರತ ಇನ್ನೂ ಆರಂಭಿಕ ಹಂತದಲ್ಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.