
ಬೆಂಗಳೂರು: ಮನೆ ಬಾಗಿಲಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ, ಔಷಧ ವಿತರಿಸುವ ‘ಗೃಹ ಆರೋಗ್ಯ’ ಯೋಜನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೂ ವಿಸ್ತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸಂಬಂಧ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಜಿಬಿಎ ಅಧಿಕಾರಿಗಳು ಸಭೆ ನಡೆಸಿದ್ದು, ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಈ ಯೋಜನೆಯನ್ನು ಫೆಬ್ರುವರಿ ತಿಂಗಳಲ್ಲಿ ನಗರಕ್ಕೂ ವಿಸ್ತರಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ನಗರದ ಎಲ್ಲ ಜನರ ಆರೋಗ್ಯ ತಪಾಸಣೆ ಕಷ್ಟಸಾಧ್ಯ ಎಂಬ ಕಾರಣಕ್ಕೆ, ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ಕೊಳೆಗೇರಿ ಪ್ರದೇಶದ ನಿವಾಸಿಗಳಿಗೆ ಅವರ ಮನೆ ಬಾಗಿಲಲ್ಲಿಯೇ ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅನಾರೋಗ್ಯ ಸಮಸ್ಯೆ ಇರುವವರಿಗೆ ಅಗತ್ಯ ಔಷಧ ಒದಗಿಸುವ ಜತೆಗೆ, ಚಿಕಿತ್ಸೆಗೂ ಕ್ರಮವಹಿಸಲಾಗುತ್ತದೆ.
ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾಯೋಗಿಕವಾಗಿ 2024ರ ಅಕ್ಟೋಬರ್‌ನಲ್ಲಿ ಕೋಲಾರದಲ್ಲಿ ಪ್ರಾರಂಭಿಸಲಾಗಿತ್ತು. 2025ರ ಜೂನ್‌ನಲ್ಲಿ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ಸದ್ಯ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಈ ಯೋಜನೆಯಡಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ವೈದ್ಯರ ತಂಡ ಭೇಟಿ: ಯೋಜನೆಯಡಿ ವೈದ್ಯರನ್ನೊಳಗೊಂಡ ತಂಡವು 30 ವರ್ಷ ಮೇಲ್ಪಟ್ಟವರನ್ನು ತಪಾಸಣೆ ಮಾಡಲಿದೆ. ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡವು ಮನೆಗಳಿಗೆ ಭೇಟಿ ನೀಡಲಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನೂ ನೀಡಲಾಗುತ್ತದೆ. ಈ ಔಷಧವನ್ನು ಪ್ರತಿ ತಿಂಗಳು ಪರಿಶೀಲಿಸಿ, ಮುಂದುವರಿಕೆಗೆ ಅಗತ್ಯವಿರುವ ಮಾತ್ರೆಗಳನ್ನು ಒದಗಿಸಲಾಗುತ್ತದೆ. ಈ ಕಾರ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜತೆಗೆ ನಮ್ಮ ಕ್ಲಿನಿಕ್‌ಗಳನ್ನೂ ಬಳಸಿಕೊಳ್ಳಲಾಗುತ್ತದೆ.
‘ಸದ್ಯ ಗ್ರಾಮೀಣ ಪ್ರದೇಶದಲ್ಲಿ ಜಾರಿಯಲ್ಲಿರುವ ಈ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಗೆ ಯೋಜನೆ ಸಹಕಾರಿಯಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಯೋಜನೆ ವಿಸ್ತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
14 ರೋಗಗಳ ಪತ್ತೆ
ಗೃಹ ಆರೋಗ್ಯ ಯೋಜನೆಯಡಿ ಸಾಂಕ್ರಾಮಿಕವಲ್ಲದ 14 ರೋಗಗಳ ಪತ್ತೆಗೆ ತಪಾಸಣೆ ಮಾಡಲಾಗುತ್ತದೆ. ಮಧುಮೇಹ ಅಧಿಕ ರಕ್ತದೊತ್ತಡ ಬಾಯಿ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಮಾನಸಿಕ ಅಸ್ವಸ್ಥತೆ ಮೂತ್ರಪಿಂಡ ಸಮಸ್ಯೆ ಶ್ವಾಸಕೋಶ ಕಾಯಿಲೆ ರಕ್ತಹೀನತೆ ಕಣ್ಣಿನ ಸಮಸ್ಯೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಲಾಗುತ್ತದೆ. ಈ ಯೋಜನೆಯಡಿ ಹೆಚ್ಚಿನ ಚಿಕಿತ್ಸೆಯನ್ನೂ ಒದಗಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿಗಳು ಶಂಕಿತ ಪ್ರಕರಣಗಳನ್ನು ದೃಢಪಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡುತ್ತಾರೆ.
ಜಿಬಿಎ ವ್ಯಾಪ್ತಿಗೂ ಗೃಹ ಆರೋಗ್ಯ ಯೋಜನೆ ವಿಸ್ತರಿಸಲು ಮುಂದಾಗಿದ್ದೇವೆ. ಈ ಸಂಬಂಧ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದ್ದು ಯೋಜನೆಯಡಿ ತಪಾಸಣೆ ಜತೆಗೆ ಔಷಧವನ್ನೂ ನೀಡಲಾಗುವುದು.ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.