ಜಿಎಸ್‌ಟಿ
ಬೆಂಗಳೂರು: ತೆರಿಗೆ ಪಾವತಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಸಣ್ಣ ವ್ಯಾಪಾರಿಗಳು ಭಯ ಪಡಬೇಕಾಗಿಲ್ಲ. ವಹಿವಾಟಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಇಲಾಖೆಯ ಜಂಟಿ ಆಯುಕ್ತೆ ಮೀರಾ ಸುರೇಶ್ ಪಂಡಿತ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ವಾಣಿಜ್ಯ ತೆರಿಗೆ ಇಲಾಖೆ ಆಯೋಜಿಸಿದ್ದ ‘ಜಿಎಸ್‌ಟಿ ಅರಿವು’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘2020–21 ರಿಂದ 2024–25ರ (ಜನವರಿವರೆಗೆ) ಅವಧಿಯಲ್ಲಿ ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ’ ಎಂದರು.
ಪ್ರಸ್ತುತ ಫೋನ್ ಪೇ, ಪೇಟಿಎಂನಲ್ಲಿ ನಡೆಸಿರುವ ವಹಿವಾಟನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಗೂಗಲ್ ಪೇ, ಬ್ಯಾಂಕ್ ವಹಿವಾಟಿನ ಮಾಹಿತಿ ಇನ್ನೂ ದೊರೆತಿಲ್ಲ. ಕೆಲವರು ವಾರ್ಷಿಕ ₹1 ಕೋಟಿ, ₹2 ಕೋಟಿ ಮತ್ತು ₹6 ಕೋಟಿವರೆಗೂ ವಹಿವಾಟು ನಡೆಸಿದ್ದಾರೆ. ವಾರ್ಷಿಕ ವಹಿವಾಟಿನ ಮಿತಿ ಮೀರಿದ ವರ್ತಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ವಿವರಿಸಿದರು.
ಇಲಾಖೆಯ ನೋಟಿಸ್ ನಂತರ ಕೆಲ ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ಸ್ವೀಕರಿಸುತ್ತಿದ್ದಾರೆ. ಯುಪಿಐ ವಹಿವಾಟು ನಿಲ್ಲಿಸಿದರೆ ನಿಮಗೆ (ಸಣ್ಣ ವ್ಯಾಪಾರಿಗಳಿಗೆ) ನಷ್ಟ. ಇದರಿಂದ ಸೂಪರ್ ಬಜಾರ್‌ಗಳಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ವರ್ತಕರು ಯಾವುದೇ ರೂಪದಲ್ಲಿ ವಹಿವಾಟು ನಡೆಸಿದ್ದರೂ ಅಂತಹ ವರ್ತಕರಿಂದ ಜಿಎಸ್‌ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಎಸ್‌ಟಿ ಕಾಯಿದೆ-2017ರ ಪ್ರಕರಣ 22ರ ನಿಯಮಗಳನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ. ಸರಕುಗಳ ಪೂರೈಕೆದಾರರ ಒಟ್ಟು ವಾರ್ಷಿಕ ವಹಿವಾಟು ₹40 ಲಕ್ಷ ಮತ್ತು ಸೇವೆಗಳ ಪೂರೈಕೆದಾರರ ವಾರ್ಷಿಕ ವಹಿವಾಟು ₹ 20 ಲಕ್ಷ ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯ. ಶೇ 18ರಷ್ಟು ತೆರಿಗೆ ಹಾಕಲಾಗಿದ್ದು, ದಾಖಲೆಗಳ ಪರಿಶೀಲನೆ ಬಳಿಕ ಕಡಿಮೆ ಮಾಡಲು ಅವಕಾಶ ಇದೆ. ಈ ವಹಿವಾಟಿನಲ್ಲಿ ನಗದು, ಯುಪಿಐ, ಪಿಓಎಸ್ ಮಷಿನ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ವಿಧಾನದ ವಹಿವಾಟು ಕೂಡ ಸೇರುತ್ತದೆ ಎಂದರು.
ಕಳೆದ ವರ್ಷ ವಾರ್ಷಿಕ ವಹಿವಾಟು ₹1.50 ಕೋಟಿ ಗಿಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು. ಈ ಪದ್ಧತಿಯಡಿ ಶೇ 0.5ರಷ್ಟು ಎಸ್‌ಜಿಎಸ್‌ಟಿ ಮತ್ತು ಶೇ 0.5ರಷ್ಟು ಸಿಜಿಎಸ್‌ಟಿ ಪಾವತಿಸಬೇಕು. ಆದರೆ, ನೋಂದಣಿ ಪಡೆಯದೆ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ ಎಂದು ಮೀರಾ ತಿಳಿಸಿದರು.
ನೋಟಿಸ್ ಬಂದಿರುವ ವರ್ತಕರು ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ, ಅಧಿಕಾರಿಗಳು ನಿಯಮ ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಉದಾಹರಣೆಗೆ ಕೆಲವು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಕೇವಲ ಶುಲ್ಕ ಪಡೆದಿದ್ದರೆ ತೆರಿಗೆ ಅನ್ವಯವಾಗದು. ಆದರೆ, ಸಮವಸ್ತ್ರ, ಬ್ಯಾಗ್ ಮಾರಾಟ ಮಾಡಿದರೆ ತೆರಿಗೆ ಕಟ್ಟಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.