ADVERTISEMENT

ಕಲ್ಯಾಣ ಮಂಟಪದಲ್ಲಿ ಆಭರಣ ಕಳವು: ಉಪನ್ಯಾಸಕಿ ಸೆರೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 16:17 IST
Last Updated 23 ಡಿಸೆಂಬರ್ 2025, 16:17 IST
<div class="paragraphs"><p>ಬಂಧನ</p></div>

ಬಂಧನ

   

ಬೆಂಗಳೂರು: ಶುಭ ಸಮಾರಂಭ ನಡೆಯುವ ಕಲ್ಯಾಣ ಮಂಟಪಗಳಿಗೆ ಸಂಬಂಧಿಕರಂತೆ ಹೋಗಿ ಚಿನ್ನಾಭರಣ ಹಾಗೂ ಹಣ ಕಳವು ಮಾಡುತ್ತಿದ್ದ ಮಹಿಳೆಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರೇವತಿ (46) ಎಂಬಾಕೆಯನ್ನು ಬಂಧಿಸಿ, ₹32 ಲಕ್ಷ ಮೌಲ್ಯದ 262 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕೆ.ಆರ್‌.ಪುರದಲ್ಲಿ ವಾಸವಾಗಿದ್ದು, ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.

ADVERTISEMENT

ಚಿಕ್ಕಲಸಂದ್ರದ ಮಂಜುನಾಥ ನಗರದಲ್ಲಿ ವಾಸವಿರುವ ನಿವಾಸಿಯೊಬ್ಬರು ನವೆಂಬರ್‌ 23ರ ಬೆಳಿಗ್ಗೆ ಸಂಬಂಧಿಕರ ಮದುವೆಗೆಂದು ತಾಯಿಯ ಜತೆ ಬಸವನಗುಡಿಯಲ್ಲಿರುವ ಕಲ್ಯಾಣಮಂಟಪಕ್ಕೆ ಹೋಗಿ ಕೊಠಡಿಯಲ್ಲಿ ಬ್ಯಾಗ್ ಇಟ್ಟಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ನಂತರ ಮನೆಗೆ ಹೋಗಿ ಬ್ಯಾಗ್ ನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು ₹3 ಲಕ್ಷ ಬೆಲೆ ಬಾಳುವ ಚಿನ್ನದ ಸರ, ಗೆಜ್ಜೆ ಕಳುವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಕಲ್ಯಾಣ ಮಂಟಪದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದರು.

ಕದ್ದ ಚಿನ್ನಾಭರಣಗಳನ್ನು ಕಾಡುಬೀಸನಹಳ್ಳೀಯಲ್ಲಿರುವ ಬ್ಯಾಂಕ್‌ನಲ್ಲಿ ಪತಿ ಮತ್ತು ಆಕೆಯ ಹೆಸರಿನಲ್ಲಿ ಅಡಮಾನ ಇಟ್ಟು ಹಣ ಪಡೆಯಲಾಗಿತ್ತು. ವಾಸವಿರುವ ಬಾಡಿಗೆ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 3 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 3 ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.