ADVERTISEMENT

‘ಬೇಡಿಕೆ ಸ್ಪಷ್ಟವಾಗಿರಲಿ; ಒಗ್ಗಟ್ಟು ಜೊತೆಗಿರಲಿ’

ಆನ್‌ಲೈನ್‌ನಲ್ಲಿ ಸರ್ಕಾರಿ ಅತಿಥಿ ಶಿಕ್ಷಕರ ಸಭೆ * ಹೋರಾಟಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:46 IST
Last Updated 19 ಸೆಪ್ಟೆಂಬರ್ 2020, 16:46 IST

ಬೆಂಗಳೂರು: ‘ಯಾವುದೇ ಹೋರಾಟದ ನೇತೃತ್ವ ವಹಿಸಿದ ಸಂಘಟನೆಯ ಒಗ್ಗಟ್ಟು ಒಡೆಯುವ ಪ್ರಯತ್ನ ಸರ್ಕಾರದಿಂದ ನಡೆಯುತ್ತದೆ. ಅದಕ್ಕೆ ಆಸ್ಪದ ಕೊಡಬಾರದು’ ಎಂದು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.

ಸರ್ಕಾರಿ ಅತಿಥಿ ಶಿಕ್ಷಕರ ಸಮಸ್ಯೆಗಳ ಕುರಿತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಶನಿವಾರ ಆನ್‌ಲೈನ್‌ನಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲ ಬೇಡಿಕೆಗಳನ್ನು ಮುಂದಿಟ್ಟರೆ ಅದರಲ್ಲಿ ಕೆಲವನ್ನು ಮಾತ್ರ ಪರಿಗಣಿಸಬಹುದು. ಆದ್ದರಿಂದ ಪ್ರಮುಖ ಬೇಡಿಕೆಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿ’ ಎಂದರು.

‘ಯಾವುದೇ ಹೋರಾಟದಲ್ಲಿ ತೊಡಗಿದವರ ಮೇಲೆ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಅಟ್ಟುವ ಕೆಲಸ ನಡೆಯುತ್ತಿದೆ. ಯಾರೋ ಹೋರಾಡುತ್ತಿದ್ದಾರೆ ಎಂದು ಉಳಿದವರು ಸುಮ್ಮನಿರಬಾರದು. ಸಂಘಟಿತರಾಗಿ ಹೋರಾಡಬೇಕು’ ಎಂದರು.

ADVERTISEMENT

‘ಶಿಕ್ಷಣರಂಗ ಸುಧಾರಿಸಬೇಕಾದರೆ ಶಿಕ್ಷಕರಿಗೆ ಸೃಜನಶೀಲ ಮತ್ತು ನೆಮ್ಮದಿಯ ವಾತಾವರಣ ಕಲ್ಪಿಸಬೇಕು. ಆದರೆ, ಅತಿಥಿ ಶಿಕ್ಷಕರ ಪರಿಸ್ಥಿತಿ ಶೋಚನೀಯವಾಗಿದೆ. ಅವರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ತುಟಿ ಸೇವೆ ಮಾಡುವುದೇ ಆಡಳಿತ ಎನ್ನುವಂತಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದರು.

ಸಮಿತಿಯ ಸದಸ್ಯ ಹಾಗೂ ಶಿಕ್ಷಕ ಆರ್.ಕೆ. ವೀರಭದ್ರಪ್ಪ, ‘ಅತಿಥಿ ಶಿಕ್ಷಕರಿಗೆ 6 ತಿಂಗಳುಗಳಿಂದ ಸಂಬಳ ನೀಡಿಲ್ಲ. ಸರ್ಕಾರದ ಯಾವುದೇ ಸಹಾಯವಿಲ್ಲದೆ ಇರುವುದರಿಂದ ಬದುಕು ನಡೆಸುವುದೇ ಕಷ್ಟವಾಗಿದೆ. ಸೇವೆಯನ್ನು ಕಾಯಂಗೊಳಿಸುವುದರಿಂದ ಸರ್ಕಾರಕ್ಕೆ ತಗುಲುವ ಖರ್ಚಿನಿಂದ ತಪ್ಪಿಸಿಕೊಳ್ಳಲು ನಮ್ಮನ್ನು ಅರೆಕಾಲಿಕ ಅಥವಾ ಅತಿಥಿ ಶಿಕ್ಷಕರು ಎಂದು ಕರೆಯಲಾಗುತ್ತಿದೆ. ಸಂಬಳದ ಬದಲು ಗೌರವ ಧನ ನೀಡಲಾಗುತ್ತದೆ. ಇದು, ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಸಂವಿಧಾನ ಹಕ್ಕಿನ ಹರಣ’ ಎಂದರು.

‘ತಿಂಗಳಿಗೆ ಕೇವಲ ₹8,500 ನೀಡಿ ನಮ್ಮನ್ನು ದುಡಿಸಿಕೊಳ್ಳಲಾಗುತ್ತಿದೆ. ಆ ಸಂಬಳವನ್ನೂ ಸರಿಯಾಗಿ ಕೊಡುತ್ತಿಲ್ಲ. ನಮ್ಮ ಹುದ್ದೆ ಕಾಯಂ ಮಾಡಬೇಕು, ಇಲ್ಲದಿದ್ದರೆ ಸೇವಾ ಪ್ರಮಾಣ ಪತ್ರವನ್ನಾದರೂ ನೀಡಬೇಕು’ ಎಂದು ಶಿಕ್ಷಕ ಕೊಪ್ಪಳದ ಹನುಮಂತಪ್ಪ ಹೇಳಿದರು.

‘ವರ್ಷ ಪೂರ್ತಿ ಕೆಲಸ ಮಾಡಿಸಿದರೆ ದಕ್ಕೆ ತಕ್ಕಂತೆ ಸೌಲಭ್ಯ ಕೊಡಬೇಕಾಗುತ್ತದೆ. ಸೇವಾ ಅವಧಿ ಪರಿಗಣಿಸಬೇಕಾಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಕೇವಲ 9 ತಿಂಗಳು ಮಾತ್ರ ಕೆಲಸ ಮಾಡಿಸುತ್ತಾರೆ. ನಮ್ಮನ್ನು ಶೋಷಿಸಲಾಗುತ್ತಿದೆ’ ಎಂದು ಹಲವು ಶಿಕ್ಷಕರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.