ADVERTISEMENT

15 ದಿನಗಳೊಳಗೆ ಗುಜರಿ ಅಂಗಡಿ ತೆರವು: ಶಾಸಕ ಮುನಿರಾಜು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2023, 20:24 IST
Last Updated 16 ಅಕ್ಟೋಬರ್ 2023, 20:24 IST
ಲಗ್ಗೆರೆಯ ಚಾಮುಂಡಿ ನಗರದಲ್ಲಿ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಗುಜರಿ ಅಂಗಡಿ, ಮನೆಗಳು ಸುಟ್ಟು ಹೋದ ಪ್ರದೇಶಗಳಿಗೆ  ಶಾಸಕ ಎಸ್. ಮುನಿರಾಜು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಲಗ್ಗೆರೆಯ ಚಾಮುಂಡಿ ನಗರದಲ್ಲಿ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಗುಜರಿ ಅಂಗಡಿ, ಮನೆಗಳು ಸುಟ್ಟು ಹೋದ ಪ್ರದೇಶಗಳಿಗೆ  ಶಾಸಕ ಎಸ್. ಮುನಿರಾಜು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ಪೀಣ್ಯ ದಾಸರಹಳ್ಳಿ: ಜನವಸತಿ ಪ್ರದೇಶದಲ್ಲಿ ಇರುವ ಗುಜರಿ ಅಂಗಡಿಗಳನ್ನು 15 ದಿನಗಳ ಒಳಗೆ ತೆರವು ಮಾಡಬೇಕು ಎಂದು ಶಾಸಕ ಎಸ್. ಮುನಿರಾಜು ಸೂಚನೆ ನೀಡಿದ್ದಾರೆ.

ಲಗ್ಗೆರೆಯ ಚಾಮುಂಡಿ ನಗರದಲ್ಲಿ ಹೈ ಟೆನ್ಶನ್ ಲೈನ್ ಸ್ಟ್ರೀಟ್ ನಲ್ಲಿರುವ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಗುಜರಿ ಅಂಗಡಿ ಹಾಗೂ ಸುತ್ತಲಿನ ಮನೆಗಳು ಸುಟ್ಟು ಹೋಗಿದ್ದವು. ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಈ ಸೂಚನೆ ನೀಡಿದರು.

ಗುಜರಿ ಅಂಗಡಿಯಲ್ಲಿ ಹೊತ್ತಿ ಉರಿಯುವ ಅಪಾಯಕಾರಿ  ವಸ್ತುಗಳೇ ಜಾಸ್ತಿ ಇದ್ದವು. ನಾವು ಎಷ್ಟೇ ನೀರು ಹಾಕಿದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಸಕಾಲದಲ್ಲಿ ಬಾರದೇ ಹೋಗಿದ್ದರೆ ಇನ್ನಷ್ಟು ಹಾನಿಯಾಗುತ್ತಿತ್ತು. ನಮ್ಮ ಮನೆಯ ರೂಮ್ ಮತ್ತು ಅಡುಗೆ ಮನೆಯ ಕಿಟಕಿ ಒಡೆದು ಹೋಗಿವೆ. ಸುತ್ತಲು ಗೋಡೆ ಸುಟ್ಟಿದೆ. ಅದನ್ನೆಲ್ಲ ಸರಿ ಮಾಡಿಸಲು ಅಂದಾಜು ₹1.5 ಲಕ್ಷ ಬೇಕಾಗುತ್ತದೆ ಎಂದು ಪಕ್ಕದ ಮನೆ ಮಾಲೀಕ ಕಿರಣ್ ಶಾಸಕರಿಗೆ ದೂರು ನೀಡಿದರು.

ADVERTISEMENT

ಸುತ್ತಮುತ್ತಲು ಸಾವಿರಾರು ಮನೆಗಳಿರುವ ಈ ಪ್ರದೇಶಲ್ಲಿ ಯಾವುದೇ ಅನುಮತಿ ಪಡೆಯದೇ ಗುಜರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದರಿಂದ ಹಾವು, ಚೇಳು, ಇಲಿಗಳ ಕಾಟವೂ ಅತಿಯಾಗಿತ್ತು. ಗುಜರಿ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಮಹಾದೇವಿ ಮತ್ತು ಪಾರ್ವತಿ ಶಾಸಕರಿಗೆ ಮನವಿ ಸಲ್ಲಿಸಿದರು.

ಶಾಸಕ ಎಸ್. ಮುನಿರಾಜು ಮಾತನಾಡಿ, ‘ಸಾರ್ವಜನಿಕರಿಂದ ಹಿಂದೆಯೇ ಈ ಬಗ್ಗೆ ದೂರು ಬಂದಿತ್ತು. 15 ದಿನಗಳ ಹಿಂದೆಯಷ್ಟೇ ಇಲ್ಲಿಗೆ ಭೇಟಿ ನೀಡಿದ್ದೆ. ಗುಜರಿ ಅಂಗಡಿಯನ್ನು ತೆರವುಗೊಳಿಸಲು ಸೂಚನೆ ನೀಡಿದ್ದೆ. ಆದರೂ ತೆರವು ಮಾಡಿರಲಿಲ್ಲ. ರಸ್ತೆ ಒತ್ತುವರಿ ಮಾಡಿ ರಬ್ಬರ್, ಟೈರ್ ಗುಜರಿ ಅಂಗಡಿ ಮಾಡಲಾಗಿದೆ.. ಜಾಗದ ಮತ್ತು ಗುಜರಿ ಅಂಗಡಿಯ ಮಾಲೀಕನ ವಿರುದ್ಧ ಕ್ರಮ ಜರುಗಿಸಿ ಪರಿಹಾರಕ್ಕೆ ಸೂಚಿಸುತ್ತೇನೆ. ಜನ ವಸತಿ ಪ್ರದೇಶದಲ್ಲಿ ಗುಜರಿ ಅಂಗಡಿಗಳನ್ನು 15 ದಿನಗಳಲ್ಲಿ ತೆರೆವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

‘ಅನುಮತಿ ಇಲ್ಲದೆ ಜನವಸತಿ ಪ್ರದೇಶಗಳಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗುವುದು. ಜನ ವಸತಿ ಪ್ರದೇಶದಲ್ಲಿರುವ ಎಲ್ಲ ಗುಜರಿ ಅಂಗಡಿಗಳನ್ನು 15 ದಿನಗಳಲ್ಲಿ ತೆರವು ಗೊಳಿಸಲಾಗುವುದು' ಎಂದು ಹಿರಿಯ ಆರೋಗ್ಯ ನಿರೀಕ್ಷಕ ಜಗದೀಶ ಎಚ್. ಪ್ರತಿಕ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.