ADVERTISEMENT

ನೆಲಮಂಗಲ: ಕಣೇಗೌಡನಹಳ್ಳಿ ಗ್ರಾ.ಪಂ ಸದಸ್ಯನ ಮೇಲೆ ಗುಂಡಿನ ದಾಳಿ

ಆರೋಪಿಗಳ ಪತ್ತೆಗೆ ಎರಡು ಪೊಲೀಸ್‌ ತಂಡ ರಚನೆ, ಸ್ಥಳಕ್ಕೆ ಎಸ್‌ಪಿ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 13:39 IST
Last Updated 27 ಅಕ್ಟೋಬರ್ 2025, 13:39 IST
ಸಲೀಂ ಪಾಷಾ
ಸಲೀಂ ಪಾಷಾ   

ನೆಲಮಂಗಲ: ತಾಲ್ಲೂಕಿನ ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಪಾಷಾ ಅವರ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ, ಪರಾರಿ ಆಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪ್ರಾರ್ಥನೆ ಮುಗಿಸಿಕೊಂಡು ಇಸ್ಲಾಂಪುರದಲ್ಲಿ ಇರುವ ಮನೆಗೆ ಬಂದಿದ್ದ ಸಲೀಂ ಅವರು ಮನೆಯ ಹೊರಗೆ ಕೆಲವರೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ಆ ಸಂದರ್ಭದಲ್ಲಿ ಬಂದಿದ್ದ ದುಷ್ಕರ್ಮಿಗಳು, ಮಾತನಾಡಿಸುವ ನೆಪದಲ್ಲಿ ಸಲೀಂ ಪಾಷಾ ಅವರ ಬಳಿ ಬಂದಿದ್ದರು. ಆಗ ಸಲೀಂ ಅವರತ್ತ ಏಕಾಏಕಿ ಗುಂಡು ಹಾರಿಸಿ ಪರಾರಿ ಆಗಿದ್ದಾರೆ. ಕೈಗೆ ಗುಂಡು ತಗುಲಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಡಿವೈಎಸ್ಪಿ ಜಗದೀಶ್‌ ಅವರ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿ ಸಲೀಂ ಅವರ ಹೇಳಿಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ADVERTISEMENT

ಆರೋಪಿಗಳ ಪತ್ತೆಗೆ ಎರಡು ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ. ನೆಲಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಕೀಯ ದ್ವೇಷದಿಂದ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

‘ರೌಡಿ ಶೀಟರ್‌ ಮುಬಾರಖ್‌ ಎಂಬಾತ ಕೊಲೆ ಆರೋಪದ ಮೇಲೆ ಕಾರಾಗೃಹದಲ್ಲಿದ್ದು, ಪೆರೋಲ್‌ ಮೇಲೆ ಹೊರಗೆ ಬಂದಿದ್ದ. ಆತನೇ ಕೃತ್ಯ ಎಸಗಿರಬಹುದು ಎಂಬ ಮಾಹಿತಿ ಸಿಕ್ಕಿದೆ. ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.