ADVERTISEMENT

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ ₹1,290 ಕೋಟಿ ವಂಚನೆ ಪತ್ತೆ

ಹಗರಣ ಶೀಘ್ರ ಸಿಬಿಐಗೆ: ಸಚಿವ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 2:33 IST
Last Updated 15 ಫೆಬ್ರುವರಿ 2023, 2:33 IST
   

ಬೆಂಗಳೂರು: ‘ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ ಅವ್ಯವಹಾರ ಹಗರಣವನ್ನು ಸಿಬಿಐ‌ಗೆ ವಹಿಸಲು ಎಲ್ಲ ರೀತಿಯ ತಯಾರಿ ನಡೆದಿದೆ. ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ, ‌ಗೃಹ ಇಲಾಖೆ ಶೀಘ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿಐಡಿ, ಸಹಕಾರ ಇಲಾಖೆ ಮತ್ತು ಇಡಿ (ಜಾರಿ ನಿರ್ದೇಶನಾಲಯ) ಹಗರಣದ ತನಿಖೆ ನಡೆಸಿ, ₹ 1,290 ಕೋಟಿ ವಂಚನೆಯನ್ನು ಪತ್ತೆಹಚ್ಚಿವೆ. ಸಿಐಡಿ ತನಿಖೆ ಸಮರ್ಪಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ ಸಿಬಿಐಗೆ ವಹಿಸಿದರೆ ತನಿಖೆ ವಿಳಂಬ ಆಗಬಹುದು ಎಂಬ ಕಾರಣಕ್ಕೆ ತಡೆಹಿಡಿಯಲಾಗಿತ್ತು’ ಎಂದು ವಿವರಿಸಿದರು.

‘ಬ್ಯಾಂಕಿನಿಂದ ಸಾಲ ಪಡೆದವರ ಆಸ್ತಿ ಜಪ್ತಿ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅಡಮಾನಕ್ಕಾಗಿ
ನೀಡಿರುವ ದಾಖಲೆಗಳು ಬೇರೆಯವರಿಗೆ ಸೇರಿವೆ. ಸಾಲ ವಸೂಲಿ ಮಾಡುತ್ತಿದ್ದೇವೆ, ಆಸ್ತಿ ಜಪ್ತಿ ಮಾಡುತ್ತೇವೆ ಎನ್ನುತ್ತಾ ಸರ್ಕಾರ
ಸುಳ್ಳು ಹೇಳುತ್ತಾ ಬಂದಿದೆ. ಹಗರಣವನ್ನು ತಕ್ಷಣ ಸಿಬಿಐಗೆ ಒಪ್ಪಿಸಬೇಕು’ ಎಂದು ವೆಂಕಟೇಶ್ ಆಗ್ರಹಿಸಿದರು.

ADVERTISEMENT

‘ಮೂರು ವರ್ಷಗಳಿಂದ ಸಿಐಡಿ ಮತ್ತು ಸಹಕಾರ ಇಲಾಖೆ ತನಿಖೆ ನಡೆಸಿ ಏನೆಲ್ಲ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಕಲೆಹಾಕಲಾಗಿದೆ. ಮುಂದಿನ ಹಂತದಲ್ಲಿ ಸಿಬಿಐಗೆ ನೀಡಲು ತಯಾರಾಗಿದ್ದೇವೆ. ಸಿಬಿಐ ಏನೆಲ್ಲಾ ದಾಖಲೆಗಳನ್ನು ಕೇಳಬಹುದೆಂಬ
ಎಂಬ ನಿರೀಕ್ಷೆಯಲ್ಲಿಯೇ ಎಲ್ಲ ಮಾಹಿತಿಗಳನ್ನು ಕಲೆಹಾಕಿದ್ದೇವೆ’ ಎಂದು ಸಚಿವರು ವಿವರಿಸಿದರು.

‘ಇಷ್ಟೆಲ್ಲ ತನಿಖೆ ಮಾಡಿದರೂ ವಂಚನೆ ಯಾರು ಮಾಡಿದ್ದಾರೆ ಎಂದು ಕಂಡು‌ಹಿಡಿಯಲು ಆಗಿಲ್ಲ. ಇಡಿ ಅಧಿಕಾರಿಗಳೂ ವಿಚಾರಣೆ ಮಾಡಿದ್ದಾರೆ. ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನೂ ಪರಿಶೀಲಿಸಿದ್ದಾರೆ. ಗೃಹ ಇಲಾಖೆಗೆ
2–3 ದಿನಗಳಲ್ಲಿ ಕಡತ ರವಾನೆ ಆಗಲಿದೆ. ನಂತರ ಸಿಬಿಐಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.

ಜೆಡಿಎಸ್‌ನ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದ ಐದು ಜಿಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ನೀಡುವ ವಿಷಯದಲ್ಲಿ ಕೇಳಿಬಂದಿದ್ದ ಆರೋಪಗಳ ಕುರಿತು ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಧಾರವಾಡ,
ವಿಜಯಪುರ, ಶಿವಮೊಗ್ಗ, ಕೋಲಾರ ಬ್ಯಾಂಕ್‍ಗಳಲ್ಲಿ ಆರೋಪ ಕೇಳಿಬಂದಿತ್ತು. ನಬಾರ್ಡ್ ನಿಯಮದ ಪ್ರಕಾರ ಸಾಲ ನೀಡಲಾಗಿದೆ. ಸಾಫ್ಟವೇರ್ ಬದಲಿಸಲಾಗಿದೆ. ಹೊಸ ವ್ಯವಸ್ಥೆಯಲ್ಲಿ ವಂಚನೆ ಮಾಡಲು ಸಾಧ್ಯವಿಲ್ಲ. ಆರೋಪ ಕೇಳಿಬಂದ ಕಾರಣ ಕೋಲಾರ ಬ್ಯಾಂಕಿನ
ವ್ಯವಸ್ಥಾಪಕರಿಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

‘ನೋಟಿಸ್ ನೀಡಿದರೆ ಸಾಲದು. ಅಕ್ರಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶರವಣ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.