ಬೆಂಗಳೂರು: ಪತ್ನಿಗೆ ವಿಡಿಯೊ ಕರೆ ಮಾಡಿ ನೇಣು ಬಿಗಿದುಕೊಂಡಂತೆ ಬೆದರಿಸಲು ಯತ್ನಿಸಿದ್ದ ವೇಳೆ ಜಿಮ್ ತರಬೇತುದಾರರೊಬ್ಬರು ಮೃತಪಟ್ಟಿದ್ದು, ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿ.ದಾಸರಹಳ್ಳಿಯ ನಿವಾಸಿ, ಜಿಮ್ ತರಬೇತುದಾರ ಅಮಿತ್‌ಕುಮಾರ್ (28) ಮೃತಪಟ್ಟವರು.
ಬಿಹಾರದ ಅಮಿತ್‌ಕುಮಾರ್ ಅವರು 10 ವರ್ಷಗಳ ಹಿಂದೆ ದಾಸರಹಳ್ಳಿಗೆ ಬಂದು ನೆಲೆಸಿದ್ದರು.
‘ಸ್ಥಳೀಯ ನಿವಾಸಿಯಾಗಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಒಂದು ವರ್ಷದ ಹಿಂದೆ ಮದುವೆ ಆಗಿದ್ದರು. ಇತ್ತೀಚೆಗೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ತನಗೆ ಸಮಯ ನೀಡುತ್ತಿಲ್ಲ. ಸದಾ ಮೊಬೈಲ್‌ನಲ್ಲೇ ಇರುತ್ತಾಳೆ ಎಂಬ ವಿಚಾರಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಜಗಳದ ನಂತರ ಪತ್ನಿ ತವರು ಮನೆ ಸೇರಿದ್ದಳು’ ಎಂದು ಪೊಲೀಸರು ಹೇಳಿದರು.
‘ಮನವಿ ಮಾಡಿದ್ದರೂ ಬಾರದ ಪತ್ನಿ’:
ಪತ್ನಿ ತವರು ಮನೆ ಸೇರಿದ್ದರಿಂದ ಬೇಸರಗೊಂಡಿದ್ದ ಅಮಿತ್, ಕರೆ ಮಾಡಿ ಮನೆಗೆ ವಾಪಸ್ ಬರುವಂತೆ ಮನವಿ ಮಾಡಿದ್ದರು. ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೂ ಆಕೆ ವಾಪಸ್ ಆಗಿರಲಿಲ್ಲ’
ಆತ್ಮಹತ್ಯೆಯೋ? ಆಕಸ್ಮಿಕ ಘಟನೆಯೋ?:
‘ವಾಪಸ್ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಬುಧವಾರ ಮಧ್ಯಾಹ್ನ ಸಹ ವಿಡಿಯೊ ಕರೆ ಮಾಡಿ ನೇಣು ಬಿಗಿದುಕೊಂಡಂತೆ ಬೆದರಿಸಲು ಯತ್ನಿಸಿದ್ದರು. ಅದಾದ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಆತ್ಮಹತ್ಯೆ ಮಾಡಿಕೊಳ್ಳುವಂತೆ ಬೆದರಿಸುವ ವೇಳೆ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಅಕ್ಕಪಕ್ಕದ ನಿವಾಸಿಗಳು ಕೊಠಡಿಯ ಬಾಗಿಲು ಒಡೆದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ತಿಳಿಸಿದರು.
‘ಜಗಳವಾದ ಮೇಲೆ ಅವರ ಪತ್ನಿ ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಮತ್ತೆ ಕರೆ ಮಾಡಿ ಕರೆಸಿಕೊಳ್ಳುತ್ತಿದ್ದ. ಆದರೆ, ಈ ಬಾರಿ ಆಕೆ ಬಂದಿರಲಿಲ್ಲ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.