ಬೆಂಗಳೂರು: ‘ರಾಜ್ಯದಲ್ಲಿ ನೀರಾವರಿ ವಿಚಾರದಲ್ಲಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ದಿಕ್ಕುತಪ್ಪಿಸಲು ‘ಮಹಾಕವಿ’ ಎಂ. ವೀರಪ್ಪ ಮೊಯಿಲಿ ಪ್ರಯತ್ನಿಸುತ್ತಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರ ಜತೆ ಬುಧವಾರ ಮತನಾಡಿದ ಅವರು, ‘ಮಣ್ಣಿನ ಮಕ್ಕಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನೆಲಮಂಗಲದಲ್ಲಿ ನಡೆದ ಸಭೆಯಲ್ಲಿ ಮೊಯಿಲಿ ಹೇಳಿದ್ದಾರೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಸರಸ್ವತಿ ಪುತ್ರ ಅವರು. ಕುವೆಂಪು ಅವರಿಗಿಂತಲೂ ದೊಡ್ಡ ಮಹಾಕವಿ. ಅವರು ಈ ರೀತಿ ಸುಳ್ಳು ಹೇಳಬಾರದಿತ್ತು. ನಮ್ಮಿಂದ ಏನು ಅನ್ಯಾಯವಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿತ್ತು’ ಎಂದರು.
‘ನೀರಾವರಿ ವಿಚಾರದಲ್ಲಿ ಇವರಿಂದ ಏನೂ ನ್ಯಾಯ ಸಿಕ್ಕಿಲ್ಲ. ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕಾವೇರಿ ವಿಷಯದಲ್ಲಿ ದಾರಿ ತಪ್ಪಿಸಿದ್ದು ಇದೇ ವೀರಪ್ಪ ಮೊಯಿಲಿ. ಕಾವೇರಿ ನ್ಯಾಯಮಂಡಳಿ ರಚನೆ ವಿರುದ್ಧ ಎಚ್.ಡಿ. ದೇವೇಗೌಡರು ಹೋರಾಟ ನಡೆಸಿದ್ದರು. ಆಗ ಈ ಮಹಾನುಭಾವ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.
ಎರಡು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೊಯಿಲಿ, ಅಧಿಕಾರದಿಂದ ಇಳಿಯುವಾಗ ರಾಜ್ಯ ಸರ್ಕಾರದ ಖಜಾನೆಯನ್ನೇ ಬರಿದು ಮಾಡಿದ್ದರು. ಪಿಯರ್‌ಲೆಸ್ ಕಂಪನಿಯಿಂದ ಸಾಲ ತಂದು ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಬೇಕಾದ ಪರಿಸ್ಥಿತಿ ಸೃಷ್ಟಿಸಿದ್ದರು. ಈಗ ಮಣ್ಣಿನ ಮಕ್ಕಳಿಂದ ಅನ್ಯಾಯವಾಗಿದೆ ಎಂಬ ಸುಳ್ಳು ಹೇಳುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.