ADVERTISEMENT

ಶ್ರೀಕೃಷ್ಣ ಸಿಸಿಬಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 20:33 IST
Last Updated 26 ನವೆಂಬರ್ 2020, 20:33 IST

ಬೆಂಗಳೂರು: ವಿವಿಧ ಸಂಸ್ಥೆಗಳ ವೆಬ್‍ಸೈಟ್ ಹ್ಯಾಕ್ ಮಾಡಿರುವ ಸಂಬಂಧ ಹೆಚ್ಚಿನ ಸಾಕ್ಷ್ಯಾಧಾರ ಸಂಗ್ರಹಿಸಲು ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅವರನ್ನು (ಶ್ರೀಕಿ) ಡಿಸೆಂಬರ್ 1ರವರೆಗೆ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

'30ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳ ವೆಬ್‍ಸೈಟ್ ಹ್ಯಾಕ್ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಶ್ರೀಕೃಷ್ಣ ತಪ್ಪೊಪ್ಪಿಕೊಂಡಿದ್ದರು. ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಕಸ್ಟಡಿಗೆ ಪಡೆಯಲಾಗಿದೆ' ಎಂದು ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ ತಿಳಿಸಿದರು.

ಭಾರತ ಸೇರಿದಂತೆ ಹಲವು ದೇಶಗಳ ಜಾಲತಾಣಗಳನ್ನು ಆರೋಪಿ ಹ್ಯಾಕ್ ಮಾಡುತ್ತಿದ್ದರು. ದತ್ತಾಂಶಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು. ಮಾದಕ ವ್ಯಸನಿಯಾಗಿದ್ದ ಆರೋಪಿ, ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುವ ಜಾಲದಲ್ಲೂ ಸಕ್ರಿಯನಾಗಿದ್ದರು.

ADVERTISEMENT

ಇದೇ ರೀತಿ ವೆಬ್‍ಸೈಟ್ ಹ್ಯಾಕ್ ಮಾಡಿ, ನಗರದಲ್ಲಿ ಆನ್‍ಲೈನ್ ಸೇವೆ ನೀಡುತ್ತಿದ್ದ ಪ್ರವೀಣ್ ಎಂಬ ಉದ್ಯಮಿಯೊಬ್ಬರಿಗೂ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟು, ದತ್ತಾಂಶ ಸೋರಿಕೆ ಮಾಡುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿದ್ದರು. ಈ ಪ್ರಕರಣವನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಕೈಗೆತ್ತಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.