ADVERTISEMENT

ಸಂಧಾನಕ್ಕೆ ಕರೆದು ಕೊಲೆ; ತಮ್ಮ– ಅಣ್ಣಂದಿರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:26 IST
Last Updated 9 ಅಕ್ಟೋಬರ್ 2021, 16:26 IST

ಬೆಂಗಳೂರು: ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಐಟಿಐ ವಿದ್ಯಾರ್ಥಿ ಲಿಖಿತ್ (19) ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

‘ವಿಭೂತಿಪುರದ ಮೊಹಮ್ಮದ್ ನಯೀಮ್ (27), ಆತನ ಅಣ್ಣಂದಿರಾದ ಮೊಹಮ್ಮದ್ ಮೋಹಿನ್, ವಾಸೀಂ ಬಂಧಿತರು. ಲಿಖಿತ್‌ ಅವರನ್ನು ಡ್ರ್ಯಾಗರ್‌ನಿಂದ ಇರಿದು ಕೊಂದು ಆರೋಪಿಗಳು ಪರಾರಿಯಾಗಿದ್ದರು. ಕೃತ್ಯ ನಡೆದು 8 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೊಮ್ಮಲೂರಿನ ಲಿಖಿತ್, ಐಟಿಐ ವ್ಯಾಸಂಗ ಮಾಡುತ್ತಿದ್ದರು. ಪರಿಚಯಿಸ್ಥ ಸಿದ್ಧಿಕ್ ಎಂಬುವರ ಬಳಿ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಜಗಳವೂ ನಡೆದಿತ್ತು. ಸಿದ್ಧಿಕ್ ಸ್ನೇಹಿತನಾಗಿದ್ದ ಆರೋಪಿ ನಯೀಮ್ ಮಧ್ಯಪ್ರವೇಶಿಸಿದ್ದ.’

ADVERTISEMENT

‘ಸಂಧಾನ ಮಾಡುವುದಾಗಿ ಹೇಳಿದ್ದ ನಯೀಮ್, ಲಿಖಿತ್‌ ಅವರನ್ನು ಲಾಲ್‌ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಶುಕ್ರವಾರ ಸಂಜೆ ಕರೆಸಿಕೊಂಡಿದ್ದ. ಅಣ್ಣಂದಿರ ಜೊತೆ ಹಾಜರಾಗಿದ್ದ ನಯೀಮ್, ಲಿಖಿತ್ ಜೊತೆ ಜಗಳ ತೆಗೆದಿದ್ದ. ಪರಸ್ಪರ ಕೈ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.’

‘ಲಿಖಿತ್‌ ಅವರನ್ನು ತಳ್ಳಾಡಿದ್ದ ಆರೋಪಿಗಳು, ದೇಹದ ಹಲವೆಡೆ ಡ್ರ್ಯಾಗರ್‌ನಿಂದ ಇರಿದಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಲಿಖಿತ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.