ಬೆಂಗಳೂರು: ‘ಪಾದಚಾರಿ ಮಾರ್ಗ ಸ್ವಚ್ಛವಾಗಿರಬೇಕು, ನಾಗರಿಕರು ನಡೆದಾಡಲು ಯಾವುದೇ ಅಡೆತಡೆ ಇರಬಾರದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ, ಹಲಸೂರಿನ ಮುಖ್ಯರಸ್ತೆಯ ಪಾದಚಾರಿ ಮಾರ್ಗಗಳ ತುಂಬ ಕಸವೇ ತುಂಬಿದೆ.
ಹಲಸೂರಿನ ಮುಖ್ಯರಸ್ತೆ ಪಾದಚಾರಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲದಷ್ಟು ಕಸ ತುಂಬಿರುತ್ತದೆ. ಪಕ್ಕದಲ್ಲಿ ನಡೆಯಲೂ ಮೂಗುಮುಚ್ಚಿಕೊಳ್ಳಬೇಕಾದ ದುಃಸ್ಥಿತಿ ಇದೆ. ಇದೂ ಸಾಲದು ಎಂಬಂತೆ ಅಕ್ಕ ಪಕ್ಕದಲ್ಲಿರುವ ಖಾಲಿ ನಿವೇಶನಗಳೂ ಕಸದ ತೊಟ್ಟಿಗಳಾಗಿವೆ.
ಹಲಸೂರು ಮುಖ್ಯರಸ್ತೆಯ ಸುತ್ತಮುತ್ತಲಿನ ನಿವಾಸಿಗಗಳು ಕಸವನ್ನು ಖಾಲಿ ನಿವೇಶನ, ಪಾದಚಾರಿ ಮಾರ್ಗ, ಮುಖ್ಯರಸ್ತೆಯ ಬದಿಯಲ್ಲಿ ಎಸೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಯಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಕಸದಿಂದ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ದನ ಕರುಗಳು ಕಸದ ರಾಶಿಯಲ್ಲಿ ಸಿಗುವ ಪ್ಲಾಸ್ಟಿಕ್ ತಿನ್ನುತ್ತಿವೆ. ಖಾಲಿ ನಿವೇಶನಗಳಲ್ಲಿನ ಕಸವನ್ನು ನಾಯಿಗಳು ರಸ್ತೆಗೆ ತಂದು ಹಾಕುತ್ತಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೂ ಧಕ್ಕೆಯಾಗುತ್ತಿರುವುದರಿಂದ ಟ್ರಾಫಿಕ್‌ನ ಸಮಸ್ಯೆ ಉಂಟಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ 15 ದಿನ ಅಥವಾ ತಿಂಗಳಿಗೊಮ್ಮೆ ಮಾತ್ರ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರು ದೂರಿದರು.
‘ಕಸದ ವಾಸನೆಯಿಂದ ಅಂಗಡಿಯಲ್ಲಿ ಕುಳಿತುಕೊಳ್ಳುವುದು ತುಂಬಾ ಕಷ್ಟವಾಗಿದೆ. ದುರ್ವಾಸನೆಯಿಂದ ಗ್ರಾಹಕರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಪಾದಚಾರಿಗಳ ಮಾರ್ಗದಲ್ಲಿ ಸಂಚರಿಸುವ ಜನರು ವಾಸನೆ ತಡೆಯಲಾರದೆ, ಕಸ ಏಕೆ ಇಲ್ಲಿದೆ ಎಂದು ನಮ್ಮನ್ನು ಕೇಳುತ್ತಿದ್ದಾರೆ’ ಎಂದು ಅಂಗಡಿ ಮಾಲೀಕ ಸೈಫುಲ್ಲಾ ಹೇಳಿದರು.
‘ಎಷ್ಟೇ ಸ್ವಚ್ಛಗೊಳಿಸಿದರೂ ಆಗಾಗ ಕಸ ಎಸೆದು ಹೋಗುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಸುತ್ತಮುತ್ತಲಿನ ವಾತಾವರಣ ದುರ್ವಾಸನೆಯಿಂದ ಕೂಡಿರುವುದರಿಂದ ತಿನ್ನುವ ಪದಾರ್ಥಗಳನ್ನೂ ಮಾರಾಟ ಮಾಡುವುದು ಅತ್ಯಂತ ಕಷ್ಟವಾಗಿದೆ’ ಎಂದು ವ್ಯಾಪಾರಿಗಳಾದ ಲೆನಿನ್ ಹಾಗೂ ವೆಂಕಟೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.