ADVERTISEMENT

ಅರೆನಗ್ನ ದೃಶ್ಯ ಚಿತ್ರೀಕರಿಸಿ ಬೆದರಿಕೆ, ಹಣ, ಚಿನ್ನಾಭರಣ ಸುಲಿಗೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 19:04 IST
Last Updated 31 ಜುಲೈ 2022, 19:04 IST
ಬಂಧಿತ ಶ್ರೀನಿವಾಸ್
ಬಂಧಿತ ಶ್ರೀನಿವಾಸ್   

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರು ಹಾಗೂ ಗೃಹಿಣಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ತೆಗೆಸಿ ಅರೆನಗ್ನ ದೃಶ್ಯ ಚಿತ್ರೀಕರಿಸಿ, ಸುಲಿಗೆ ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಮಹಾಲಕ್ಷ್ಮಿಲೇಔಟ್‌ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ನಗರದ ಚಿಕ್ಕಗೊಲ್ಲರಹಟ್ಟಿಯ ನಿವಾಸಿಗಳಾದ ರವಿ, ಆತನ ಪತ್ನಿ ಮಂಗಳಾ, ಶ್ರೀನಿವಾಸ್ ಹಾಗೂ ಆತನ ಸಹೋದರ ಶಿವಕುಮಾರ ಬಂಧಿತರು. ರವಿ, ಮಂಗಳಾ ಉತ್ತರಹಳ್ಳಿಯ ಬಿಜಿಎಸ್‌ ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಸಹೋದರರು ಗ್ಯಾಸ್ ಸಿಲಿಂಡರ್‌ ವಿತರಕರಾಗಿ ಕೆಲಸ
ಮಾಡುತ್ತಿದ್ದರು.

‘ಮೂರು ತಿಂಗಳಿಂದ ಈ ತಂಡವು ನಗರದ ವಿವಿಧ ಬಡಾವಣೆಗಳಲ್ಲಿ ನಿರುದ್ಯೋಗಿ ಮಹಿಳೆಯರನ್ನು ಪತ್ತೆಹಚ್ಚಿ ಅವರ ಮನೆಗೆ ತೆರಳಿ ಕೆಲಸ ಕೊಡಿಸುವ ನಾಟಕವಾಡುತ್ತಿತ್ತು. ಕಂಪನಿಗೆ ಸಂಬಂಧಿಸಿದ ಮುಖ್ಯಸ್ಥರನ್ನು ಭೇಟಿ ಮಾಡಿಸುವ ನೆಪದಲ್ಲಿ ಮಹಿಳೆಯರು, ಯುವತಿಯರನ್ನು ನೆಲಮಂಗಲ, ಸೊಂಡೆಕೊಪ್ಪ, ತಾವರೆಕೆರೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅವರನ್ನು ಅರೆ ನಗ್ನಗೊಳಿಸಿ ವಿಡಿಯೊ ಚಿತ್ರೀಕರಿಸುತ್ತಿದ್ದರು. ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಕ್ಕೆ ವಿಡಿಯೊ ಹರಿಯಬಿಡುವ ಬೆದರಿಕೆ ಒಡ್ಡುತ್ತಿದ್ದರು’ ಎಂದು ಮೂಲಗಳು
ತಿಳಿಸಿವೆ.

ADVERTISEMENT

‘ಬಂಧಿತರಿಂದ ₹1.2 ಲಕ್ಷದ ಚಿನ್ನಾಭರಣ, ₹70 ಸಾವಿರ ನಗದು, ಎ.ಟಿ.ಎಂ ಕಾರ್ಡ್‌ 1, ಕಾರು, ಮೂರು ಮೊಬೈಲ್‌, ಚಾಕು, ಕಬ್ಬಿಣದ ಪೈಪ್‌, ಬ್ಯಾಟ್‌ ವಶಕ್ಕೆ ಪಡೆಯಲಾಗಿದೆ.’

‘ಈ ತಂಡವು ಇದೇ ರೀತಿಯ ಹಲವು ಕೃತ್ಯಗಳಲ್ಲಿ ಭಾಗಿಯಾಗಿತ್ತು. ಆದರೆ, ಮರ್ಯಾದೆಗೆ ಅಂಜಿದ್ದ ಆ ಮಹಿಳೆಯರು ದೂರು ನೀಡಿರಲಿಲ್ಲ. ಆದರೆ, ಜುಲೈ 20ರಂದು ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು. ಆ ಮಹಿಳೆಯನ್ನು ತಾವರಕೆರೆಯ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು 15 ಗ್ರಾಂ ಚಿನ್ನದ ಸರ, ಎರಡು ಚಿನ್ನದ ಓಲೆ, ಎರಡು ಉಂಗುರ, ಫೋನ್‌ ಪೇ ಮೂಲಕ ₹ 84 ಸಾವಿರ ವರ್ಗಾವಣೆ ಮಾಡಿಕೊಂಡಿದ್ದರು. ಎಟಿಎಂ ಸಹ ಕಸಿದುಕೊಂಡು ಬೆದರಿಕೆ ಹಾಕಿ ಪಿನ್‌ ಸಂಖ್ಯೆ ಪಡೆದು ಕರ್ನಾಟಕ ಬ್ಯಾಂಕ್‌ ಖಾತೆಯಿಂದ ₹ 40 ಸಾವಿರ ಹಣ ಡ್ರಾ ಮಾಡಿದ್ದರು’ ಎಂದು ಪೊಲೀಸ್‌ ಮೂಲಗಳು
ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.