ADVERTISEMENT

ಶ್ರೇಯಸ್‌ಗೆ ‘ಹನುಮಂತರಾವ್‌ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 15:41 IST
Last Updated 19 ಆಗಸ್ಟ್ 2021, 15:41 IST
ಬೆಂಗಳೂರಿನ ಧೀರಜ್‌ ರಾಜ್‌ಪಾಲ್‌ ಅವರಿಗೆ ಪ್ರಶಸ್ತಿ ತಂದುಕೊಟ್ಟ ಚಿತ್ರ
ಬೆಂಗಳೂರಿನ ಧೀರಜ್‌ ರಾಜ್‌ಪಾಲ್‌ ಅವರಿಗೆ ಪ್ರಶಸ್ತಿ ತಂದುಕೊಟ್ಟ ಚಿತ್ರ   

ಬೆಂಗಳೂರು: ಶ್ರೇಯಸ್‌ ರಾವ್‌ ಅವರು ಯೂತ್‌ ಫೋಟೊಗ್ರಾಫಿಕ್‌ ಸೊಸೈಟಿ (ವೈಪಿಎಸ್‌) ನೀಡುವ ‘ಇ. ಹನುಮಂತರಾವ್‌ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.

ಹಿಮಾದ್ರಿ ಭುವನ್‌ (ಡಾ.ಜಿ.ಥಾಮಸ್‌ ಪ್ರಶಸ್ತಿ), ಪ್ರಸೆನ್‌ಜಿತ್‌ ದಾಸ್‌ (ಚಕ್ರವರ್ತಿ ರಾಜಗೋಪಾಲ್‌), ವಿನ್ಯಾಸ ಉಬರಡ್ಕ (ಪಿ.ಎನ್‌.ಎ.ಪೆರುಮಾಳ್‌), ದ್ವಿಪರ್ಣಕುಮಾರ್‌ ದತ್ತ (ಎಂ.ವೈ.ಘೋರ್ಪಡೆ), ಡಾ.ಅಜಿತ್‌ ಹುಯಿಲಗೋಳ (ಬಿ.ಎನ್‌.ಎಸ್‌.ದೇವ್‌), ಜಯೇಂದ್ರ ಬಿ.ಕಾಮ್ದಾರ್‌ (ಓ.ಸಿ.ಎಡ್ವರ್ಡ್‌), ಮುಖೇಶ್‌ ಶ್ರೀವತ್ಸವ (ಡಾ.ಡಿ.ವಿ.ರಾವ್‌) ಹಾಗೂ ಅರ್ಪಣ್‌ ಕಲಿತ (ಎಸ್‌.ಜಿ.ನೇಗಿಹಾಳ್‌) ಅವರು ಸ್ವರ್ಣ ಮಹೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವೈಪಿಎಸ್‌, ಪ್ರತಿ ವರ್ಷದಂತೆ ಈ ಬಾರಿಯೂ ಅಖಿಲ ಭಾರತ ಮಟ್ಟದ ಸಲಾನ್‌ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿತ್ತು. ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೊಗ್ರಫಿ (ಎಫ್‌ಐಪಿ) ಸಹಯೋಗದೊಂದಿಗೆ ಡಿಜಿಟಲ್‌ ವೇದಿಕೆಯಲ್ಲಿ ಒಟ್ಟು ನಾಲ್ಕು (ವರ್ಣ, ಕಪ್ಪು ಬಿಳುಪು, ಪ್ರಕೃತಿ–ವನ್ಯಜೀವಿ ಹಾಗೂ ಪ್ರವಾಸಿ) ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ದಾಖಲೆಯ 1,107 ಛಾಯಾಗ್ರಹಕರು ಪಾಲ್ಗೊಂಡಿದ್ದರು.

ADVERTISEMENT

ಕಪ್ಪು ಬಿಳುಪು ವಿಭಾಗದಲ್ಲಿ ಹೌರಾದ ದೇವರ್ಗ್‌ ಮುಖರ್ಜಿ ಮತ್ತು ಕೋಲ್ಕತ್ತದ ಲಿಪಿ ದಾಸ್‌ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ. ವರ್ಣ ವಿಭಾಗದಲ್ಲಿ ಗುವಾಹಟಿಯ ಹಿಮಾದ್ರಿ ಭುವನ್‌ ವಿಜೇತರಾದರೆ, ಕೋಲ್ಕತ್ತದ ಸೋಮನಾಥ ಪಾಲ್‌ ಅವರು ರನ್ನರ್‌ ಅಪ್‌ ಆಗಿದ್ದಾರೆ.

ಪ್ರಕೃತಿ ಹಾಗೂ ವನ್ಯಜೀವಿ ವಿಭಾಗದ ಪ್ರಶಸ್ತಿ ಪಶ್ಚಿಮ ಬಂಗಾಳದ ಪದ್ಮನವಸಂತ್ರ ಹಸ್ನಾಬಾದ್‌ ಅವರ ಪಾಲಾಗಿದೆ. ಮುಂಬೈನ ರಾವಲನಾಥ್‌ ಜೋಶಿ ಎರಡನೇ ಬಹುಮಾನ ಗಳಿಸಿದ್ದಾರೆ.

ಪ್ರವಾಸಿ ವಿಭಾಗದಲ್ಲಿ ಬೆಂಗಳೂರಿನ ಧೀರಜ್‌ ರಾಜ್‌ಪಾಲ್‌ ಮತ್ತು ದೇವರಾಜ್‌ ಚಕ್ರವರ್ತಿ ಅವರು ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದಾರೆ. ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿಯು ಹಿಮಾದ್ರಿ ಭುವನ್‌ ಪಾಲಾಗಿದೆ. ಫೋಟೊಗ್ರಫಿ ಕ್ಲಬ್‌ ಆಫ್‌ ಅಸ್ಸಾಂ, ಅತ್ಯುತ್ತಮ ಛಾಯಾಚಿತ್ರ ಕೂಟ ಬಹುಮಾನಕ್ಕೆ ಪಾತ್ರವಾಗಿದೆ.

ಬೆಂಗಳೂರಿನ ಯುಕ್ತಿ ಪದ್ಮಾಕರ್‌ (ಕಪ್ಪು ಬಿಳುಪು), ವಿ.ಶಾರಿಕಾ (ಪ್ರಕೃತಿ) ಹಾಗೂ ಮೂಡುಬಿದಿರೆಯ ಪರಮ್‌ ಜೈನ್‌ (ವರ್ಣ, ಪ್ರವಾಸಿ) ಯುವ ಪ್ರತಿಭಾ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೇ 21ರಂದು ಚಿತ್ರಕಲಾ ಪರಿಷತ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಿಗದಿಯಾಗಿದೆ. ಅದೇ ದಿನ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.