ADVERTISEMENT

ದೊಡ್ಡಪ್ಪನ ಮನೆಯಲ್ಲೇ ಕಳ್ಳತನ ಎಸಗಿದ್ದ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 20:44 IST
Last Updated 23 ಮಾರ್ಚ್ 2020, 20:44 IST

ಬೆಂಗಳೂರು: ಹಳೇ ದ್ವೇಷದಿಂದಾಗಿ ದೊಡ್ಡಪ್ಪನ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದ ಆರೋಪದಡಿರಾಜಸ್ಥಾನದ ವಿಜಯ್‌ ರಾಜ್ ಚೌಹಾಣ್ (46) ಸೇರಿ ಆರು ಮಂದಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

’ಠಾಣೆ ವ್ಯಾಪ್ತಿಯಲ್ಲಿರುವ ಜವಾರಿಲಾಲ್ ಎಂಬುವರ ಮನೆಗೆ ಜ 29ರ ರಾತ್ರಿ ನುಗ್ಗಿದ್ದ ಆರೋಪಿಗಳು, ಮನೆಯ ಕೆಲಸಗಾರ ಸತ್ಯನಾರಾಯಣ ಎಂಬಾತನ ಕೈಕಾಲು ಕಟ್ಟಿ ಹಾಕಿ ಸುಲಿಗೆ ಮಾಡಿದ್ದರು. ತನಿಖೆ ಕೈಗೊಂಡಾಗ ವಿಜಯ್‌ರಾಜ್ ಸಿಕ್ಕಿಬಿದ್ದ. ಉತ್ತಮ್ ಸಿಂಗ್ (50), ಅಮರ್ ಸಿಂಗ್ (25), ಕರಣ್‌ಸಿಂಗ್ (19) ಹಾಗೂ ಅಮ್ಜದ್ (39) ಎಂಬುವರ ಗ್ಯಾಂಗ್‌ ಕಟ್ಟಿಕೊಂಡು ಆತ ಕೃತ್ಯ ಎಸಗಿದ್ದ. ಆರೋಪಿಗಳಿಂದ ₹75 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 25 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜಸ್ಥಾನದ ಜವಾರಿಲಾಲ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಬನಶಂಕರಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣ ಮಾರಾಟ ಮಳಿಗೆ ತೆರೆದಿದ್ದರು. ಅವರ ತಮ್ಮನ ಮಗನೇ ಆರೋಪಿ ವಿಜಯರಾಜ್. ಆತನೂ ಬನಶಂಕರಿಯಲ್ಲೇ ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿ ಇಟ್ಟುಕೊಂಡಿದ್ದ. ಇಬ್ಬರ ನಡುವೆ ಪೈಪೋಟಿ ಇತ್ತು. ಈ ಸಂಬಂಧ ಕೆಲ ಬಾರಿ ಜಗಳವೂ ನಡೆದಿತ್ತು.ಅದೇ ದ್ವೇಷದಲ್ಲೇ ವಿಜಯರಾಜ್‌ ಸುಲಿಗೆಗೆ ಸಂಚು ರೂಪಿಸಿದ್ದ.’

ADVERTISEMENT

‘ಆರೋಪಿ ಉತ್ತಮ್ ಸಿಂಗ್ ಹಾಗೂ ಇತರ ಆರೋಪಿಗಳನ್ನು ನಗರಕ್ಕೆ ಕರೆಸಿಕೊಂಡಿದ್ದ ವಿಜಯ್‌ರಾಜ್, ಅವರಿಗೆ ಕೊಠಡಿ ಮಾಡಿಕೊಟ್ಟಿದ್ದ. ಸುಲಿಗೆ ಬಳಿಕ ಅವರ ಸಮೇತವೇ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.