ಸಮಾರಂಭದಲ್ಲಿ (ಕುಳಿತವರು ಎಡದಿಂದ) ನಾರಾಯಣ ಭಟ್ ಹುಳೇಗಾರು, ಪರಮೇಶ್ವರ ಹೆಗಡೆ, ಎಸ್.ಎನ್. ಹೆಗಡೆ, ಜಿ.ವಿ. ಭಟ್ ಗೋರೆ, ಪಾದೇಕಲ್ಲು ವಿಷ್ಣು ಭಟ್ಟ, ಕೆ.ಜೆ. ದಿಲೀಪ್, ಕಾವ್ಯ ಜಿ. ರಾವ್ ಹಾಗೂ ಸಂಜಯ ಬೆಳೆಯೂರು ಅವರಿಗೆ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಬೆಂಗಳೂರು: ಅಖಿಲ ಹವ್ಯಕ ಮಹಾಸಭಾವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 82ನೇ ವಾರ್ಷಿಕ ಹವ್ಯಕ ಸಂಸ್ಥಾಪನೋತ್ಸವದಲ್ಲಿ ಹವ್ಯಕ ಸಾಧಕರನ್ನು ಗೌರವಿಸಲಾಯಿತು.
ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಹಾಗೂ ಪದಾಧಿಕಾರಿಗಳು 2024–25ನೇ ಸಾಲಿನ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಉದ್ಯಮಿಯೂ ಆಗಿರುವ ಸಮಾಜ ಸೇವಕ ಜಿ.ವಿ. ಭಟ್ ಗೋರೆ ಅವರು ‘ಹವ್ಯಕ ವಿಭೂಷಣ’ ಪ್ರಶಸ್ತಿ (₹ 30 ಸಾವಿರ ನಗದು), ಭಾಷಾ ತಜ್ಞ ಪಾದೇಕಲ್ಲು ವಿಷ್ಣು ಭಟ್ಟ, ಶಿಕ್ಷಣ ತಜ್ಞ ಎಸ್.ಎನ್. ಹೆಗಡೆ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಅವರು ‘ಹವ್ಯಕ ಭೂಷಣ’ ಪ್ರಶಸ್ತಿ (ತಲಾ ₹ 20 ಸಾವಿರ ನಗದು) ಸ್ವೀಕರಿಸಿದರು.
ಯಕ್ಷಗಾನ ಕಲಾವಿದ ಸಂಜಯ ಬೆಳೆಯೂರು, ನೃತ್ಯ ಕಲಾವಿದೆ ಕಾವ್ಯ ಜಿ. ರಾವ್, ಸಂಗೀತ ಕಲಾವಿದ ಕೆ.ಜೆ. ದಿಲೀಪ್ ಅವರಿಗೆ ‘ಹವ್ಯಕ ಶ್ರೀ’ ಪ್ರಶಸ್ತಿ (ತಲಾ ₹ 10 ಸಾವಿರ ನಗದು) ಹಾಗೂ ‘ಹವ್ಯಕ ಮಾಸ ಪತ್ರಿಕೆ’ ಸಂಚಾಲಕ ನಾರಾಯಣ ಭಟ್ ಹುಳೇಗಾರು ಅವರಿಗೆ ‘ಹವ್ಯಕ ಸೇವಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ‘ಪಲ್ಲವ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಪಾದೇಕಲ್ಲು ವಿಷ್ಣು ಭಟ್ಟ, ‘ನಮ್ಮ ಸಮುದಾಯವು ಯಾವುದೇ ಪ್ರಶಸ್ತಿ ಪುರಸ್ಕಾರದ ಅಪೇಕ್ಷೆಯಿಲ್ಲದೆ ಬೆಳೆದಿದೆ. ನಮ್ಮ ಹಿರಿಯರು ಸಾಕಷ್ಟು ಕೆಲಸ ಮಾಡಿದರೂ ಪ್ರಶಸ್ತಿಗಳಿಗೆ ಹಂಬಲಿಸಲಿಲ್ಲ. ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ಮಹಾನ್ ಗ್ರಂಥಗಳನ್ನು ಬರೆದಿದ್ದಾರೆ. ಅವುಗಳ ಓದಿನಿಂದ ನಮಗೆ ಸಾಧಿಸಲು ಸಾಧ್ಯವಾಯಿತು. ಕೃಷಿ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದವರು ತಮ್ಮ ಅಸ್ತಿತ್ವ ಕಂಡುಕೊಂಡದ್ದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.
ಕೆ.ಜೆ. ದಿಲೀಪ್, ‘ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಲಲಿತಕಲೆಯಲ್ಲಿಯೂ ಆಸಕ್ತಿ ಬೆಳೆಸಿ, ಪ್ರೋತ್ಸಾಹಿಸಬೇಕು’ ಎಂದರು.
ಇದೇ ವೇಳೆ ಇತ್ತೀಚೆಗೆ ಸಿಇಟಿ ಪರೀಕ್ಷೆ ಕೇಂದ್ರಗಳಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ, ಮೊಂಬತ್ತಿ ಹಚ್ಚಿ ಪ್ರತಿಭಟಿಸಲಾಯಿತು.
ಪರೀಕ್ಷೆ ಧಿಕ್ಕರಿಸಿದವರಿಗೆ ಪ್ರಶಸ್ತಿ
ಜನಿವಾರವನ್ನು ತೆಗೆಯಲು ಒಪ್ಪದೆ ಸಿಇಟಿ ಪರೀಕ್ಷೆ ಬರೆಯದ ಬೀದರನ್ ಸಚಿವ್ರತ್ ಕುಲಕರ್ಣಿ ಹಾಗೂ ತೀರ್ಥಹಳ್ಳಿಯ ಅಭಿಜ್ಞಾ ಅವರಿಗೆ ಹವ್ಯಕ ಮಹಾಸಭೆಯಿಂದ ‘ಧರ್ಮಶ್ರೀ ಪ್ರಶಸ್ತಿ’ಯನ್ನು ಸಾಂಕೇತಿಕವಾಗಿ ನೀಡಿ ಅವರ ಧರ್ಮಾಭಿಮಾನವನ್ನು ಗೌರವಿಸಲಾಯಿತು. ‘ಧಿಯೋ ಯೋ ನಃ ಪ್ರಚೋದಯಾತ್ ಎಂಬುದು ನಮ್ಮ ಧ್ಯೇಯವಾಕ್ಯ. ಬ್ರಾಹ್ಮಣ ವಿರೋಧಿ ಮನಸ್ಥಿತಿಯಿಂದ ಜನಿವಾರವನ್ನು ಕತ್ತರಿಸಿದವರಿಗೆ ಹಾಗೂ ಕಾಶ್ಮೀರದಲ್ಲಿನ ಭಯೋತ್ಪಾದಕರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ಹವ್ಯಕ ಮಹಾಸಭೆ ಆಶಿಸುತ್ತದೆ’ ಎಂದು ಡಾ. ಗಿರಿಧರ ಕಜೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.